

ಶೇಖರ್ ಸಂಕೋಡನಹಳ್ಳಿ ಅರಸೀಕೆರೆ
ತಾಲೂಕಿನ ಗಂಡಸಿ ಹೋಬಳಿ ಹುಲ್ಲೇಕೆರೆ ಗ್ರಾಮದಲ್ಲಿರುವ ಶ್ರೀಚನ್ನಕೇಶವ ದೇವಾಲಯ ಭಕ್ತರು, ಪ್ರವಾಸಿಗರು ಹಾಗೂ ಇತಿಹಾಸ ಪ್ರಿಯರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ.
ಹೊಯ್ಸಳರ ದೊರೆ ಒಂದನೇ ನರಸಿಂಹನ ಆಳ್ವಿಕೆಯಲ್ಲಿ ಅವನ ಮಹಾ ದಂಡನಾಯಕನಾಗಿದ್ದ ಹೆಗ್ಗಡೆ ಬೂಚಿರಾಜನು ಕ್ರಿ..ಶ. 1163 ರಲ್ಲಿ ನಿರ್ಮಿಸಿದನು ಎಂಬುದಕ್ಕೆ ಅನೇಕ ಐತಿಹಾಸಿಕ ದಾಖಲೆಗಳಿವೆ. ಅಂದು ಇಡೀ ಗ್ರಾಮವನ್ನು ಅಗ್ರಹಾರವಾಗಿ ಪರಿವರ್ತಿಸಿದ್ದನೆಂದು ಹೇಳುವ ಪ್ರತೀತಿಯಿದೆ. ದೇಗುಲದಲ್ಲಿ ಚನ್ನಕೇಶವನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಪೂಜೆ, ಪುನಸ್ಕಾರಗಳು ನಿತ್ಯ ನಿರಂತರವಾಗಿ ನಡೆದಿದೆ. ಹೊಯ್ಸಳರ ಲಾಂಛನ ಬಿಂಬಗಳಲ್ಲಿ ಹುಲ್ಲೇಕೆರೆ ಕೇಶವಾಲಯದಲಿರುವುದು ಒಂದು ಅಪೂರ್ವ ಸೃಷ್ಟಿಯಂತಿದೆ. ಉಗ್ರಪ್ರತಾಪಿಯಾದ ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರಣವಿದೆ. ಜತೆಗೆ ಚಾಮುಂಡಿಯೂ ಮಹಿಷನ ಜುಟ್ಟು ಹಿಡಿದು ತ್ರಿಶೂಲದಿಂದ ಕೊಲ್ಲುತ್ತಿರುವ ದೃಶ್ಯ ಮನೋಹರವಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಚನ್ನಕೇಶವನೆಂದು ಕರೆಯಲ್ಪಡುವ 6 ಅಡಿ ಎತ್ತರದ ಚತುರ್ವಿಂಶತಿ ಕೇಶವನ ವಿಗ್ರಹವಿದೆ. ಶೈವ, ವೈಷ್ಣವ ದೇವಾಲಯಗಳ ಸಮ್ಮಿಶ್ರಣವನ್ನು ಇಲ್ಲಿ ಕಾಣಬಹುದಾಗಿದ್ದು ಭಕ್ತರ ಪಾಲಿನ ನೆಚ್ಚಿನ ತಾಣವಾಗಿದೆ.
ವಿಶೇಷತೆ: ಪ್ರತಿ ವರ್ಷದ ದೀಪಾವಳಿ ವೇಳೆ ಗ್ರಾಮಸ್ಥರು ತಿಂಗಳು ಪೂರ್ತಿ ದೀಪ ಹಚ್ಚುವ ಮೂಲಕ ಅಖಂಡತೆ ಜ್ಯೋತಿ ಹಚ್ಚಲಾಗುತ್ತದೆ. ಭಜನೆ ಮೂಲಕ ದೇವರನ್ನು ಪ್ರಾರ್ಥಿಸುವ ಪರಂಪರೆ ಚಾಲ್ತಿಯಲ್ಲಿದೆ. ರಾಜಪ್ರಭುತ್ವದಂತೆ ಅಧಿಕಾರ ನಮಗೂ ದೊರೆಯಲೆಂದು ಚುನಾವಣೆ ಕಣಕ್ಕಿಳಿಯುವ ಹುರಿಯಾಳುಗಳ ಸಂಖ್ಯೆಗೂ ಕೊರತೆಯಿಲ್ಲ. ಅಖಂಡ ಜ್ಯೋತಿ ಇಳಿಸುವ ಕೊನೆಯ ದಿನ ಸುಕ್ಷೇತ್ರ ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಭಾಗಿಯಾಗಿ ಮಹಾಮಂಗಳಾರತಿ ಮಾಡುವರು. ತನ್ಮೂಲಕ ಗ್ರಾಮವನ್ನು ಎಲ್ಲ ಸಂಕಷ್ಟಗಳಿಂದ ಪಾರು ಮಾಡಲೆಂದು ಹರಕೆ ಕಟ್ಟಿಕೊಳ್ಳುವ ಪದ್ಧತಿ ಮುಂದುವರಿದಿದೆ. ದೇಶ-ವಿದೇಶಿಗರು ಆಗಾಗ ಭೇಟಿ ಕೊಟ್ಟು ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದೆ. ಚುನಾವಣೆ ವೇಳೆ ಅದೃಷ್ಟ ಪರೀಕ್ಷೆಗೆ ಇಳಿಯುವ ಅಭ್ಯರ್ಥಿಗಳು ಚನ್ನಕೇಶವನಲ್ಲಿ ಪ್ರಾರ್ಥಿಸಿದರೆ ಜಯ ಖಚಿತ ಎನ್ನುವ ಮಾತುಗಳು ಚಾಲ್ತಿಯಲ್ಲಿವೆ.
ಮಾರ್ಗ: ಅರಸೀಕೆರೆ-ಮೈಸೂರು ಮಾರ್ಗವಾಗಿ ಗೊಲ್ಲರಹಳ್ಳಿ ಗೇಟ್ ಮಾರ್ಗವಾಗಿ ಹುಲ್ಲೇಕೆರೆ ಗ್ರಾಮಕ್ಕೆ ತಲುಪಬಹುದು, ಯಡವನಹಳ್ಳಿ ಸೋಮೇನಹಳ್ಳಿ ಮಾರ್ಗದ ಜತೆಗೆ ತಿಪಟೂರು ಗಂಡಸಿ ಸಂಪರ್ಕಿಸುವ ಚಿಂದೇನಹಳ್ಳಿ ಗಡಿ ಭಾಗದಿಂದಲೂ ಚನ್ನಕೇಶವನ ದೇಗುಲ ತಲುಪಬಹುದು. ಭಕ್ತರು ಹಾಗೂ ಪ್ರವಾಸಿಗರು ಆಟೋ, ಸಾರಿಗೆ ಬಸ್ ಸೌಲಭ್ಯ ಪಡೆಯಬಹುದು.
ಅಪರೂಪ: ದೇವಾಲಯ ನಕ್ಷತ್ರಾಕಾರದ ಜಗುಲಿಯನ್ನು ಹೊಂದಿದೆ. ಆದರೆ ಇಡೀ ದೇವಾಲಯ ಅಂತಹ ರಚನೆಯಿಂದ ವಿಭಿನ್ನವಾಗಿದ್ದು ಜಗಲಿ ಇಲ್ಲದೇ ನೆಲಗಟ್ಟಿನಿಂದ ಮೇಲೆದ್ದಿರುವ ವಿಶಿಷ್ಟ ದೇವಾಲಯ ಇದಾಗಿದೆ. ವಿಷ್ಟುವಿನ ವಿವಿಧ ರೂಪಗಳನ್ನೊಳಗೊಂಡ 25 ವಿಗ್ರಹಗಳನ್ನು ಇಲ್ಲಿ ಕಾಣಬಹುದು. ಶಂಖ, ಚಕ್ರ, ಗಧಾ, ಪದ್ಮಗಳನ್ನು ಬೇರೆ ಬೇರೆ ಕೈಯಲ್ಲಿ ಬದಲಿಸುವ ವಿಭಿನ್ನ ಮೂರ್ತಿಗಳು ಆಗಿದ್ದು ಆದ್ದರಿಂದಲೇ ಇವುಗಳನ್ನು ಚತುರ್ವಿಂಶತಿ ರೂಪ ಎಂದು ಕರೆಯಲಾಗುತ್ತದೆ. ದೇವಾಲಯಕ್ಕೆ ಕಿರೀಟ ತೊಡಿಸಿರುವಂತೆ ಮೇಲ್ಭಾಗದಲ್ಲಿ ಕೆತ್ತನೆಗೊಂಡಿರುವ ಕುಸರಿ ಕೆಲಸದಿಂದ ನಯನಮನೋಹರ ವಿಗ್ರಹಗಳ ಕೆತ್ತನೆ ಅದ್ಭುತವಾಗಿದೆ. ಯಕ್ಷ ಯಕ್ಷಿಯರು, ಮಕರ -ಸಿಂಹಗಳು, ದೇವತಾ ವಿಗ್ರಹಗಳು, ವೈಷ್ಣವ ವಿಗ್ರಹಗಳನ್ನು ಒಂದು ಹರಿಹರ ಮೂರ್ತಿಯನ್ನು ಕಾಣಬಹುದಾಗಿದ್ದು ಇಂದಿಗೂ ಹೊಳಪು ಕಳೆದುಕೊಂಡಿಲ್ಲ.
ಪ್ರಮುಖ ಆಕರ್ಷಣೆ: ತಾಲೂಕಿನ ಗಡಿ ಭಾಗವಾದ ಹುಲ್ಲೇಕೆರೆ ಗ್ರಾಮದ ಹೊರ ವಲಯದಲ್ಲಿ ದಿಬ್ಬವೊಂದರ ಮೇಲೆ ಸುಂದರವಾದ ಚನ್ನಕೇಶವ ದೇವಾಲಯವನ್ನು ಕಾಣಬಹುದು. ದೇವಾಲಯವು ಮೇಲ್ನೋಟಕ್ಕೆ ಸೋಮನಾಥಪುರದ ದೇವಾಲಯವನ್ನು ನೆನಪಿಸುವಂತಿದ್ದರೂ ಸಂಪೂರ್ಣ ವಿಭಿನ್ನವಾಗಿದೆ. ಇದು ಒಂದೇ ಗರ್ಭಗೃಹವುಳ್ಳ (ಏಕ ಕೂಟ)ದ ದೇವಾಲಯವಾಗಿದ್ದು, ಕಲೆ ಮತ್ತು ಸಂಸ್ಕೃತಿಯ ಪ್ರತೀಕದಂತಿದ್ದು ಅದ್ಭುತಗಳ ಆಗರವಾಗಿದೆ. ಪೂರ್ವ ದಿಕ್ಕಿನಲ್ಲಿರುವ ಪ್ರವೇಶ ದ್ವಾರದಲ್ಲಿ ಎರಡು ದೊಡ್ಡ ಆನೆಗಳು, ದ್ವಾರ ಪಾಲಕರು, ರತಿ-ಮನ್ಮಥ, ಮಿಥುನ ಶಿಲ್ಪಗಳು, ವಾದ್ಯಗಾರರು, ನರ್ತಕರ ಶಿಲ್ಪಗಳಿವೆ. ಸರಳ ನವರಂಧ್ರದಲ್ಲಿ 9 ಭುವನೇಶ್ವರಿ ವಿಗ್ರಹಗಳಿವೆ. ಅದರಲ್ಲಿ ಕಾಳಿಂಗಮರ್ಧನ ಪಟ್ಟಿಕೆಗಳನ್ನು ಶಿಲ್ಪಿ ಅಧ್ಬುತವಾಗಿ ಚಿತ್ರಿಸಿದ್ದಾನೆ. ಹೀಗೆ ಬಗೆ ಬಗೆಯ ಕೆತ್ತನೆಯಿಂದ ಸೃಷ್ಟಿಗೊಂಡಿರುವ ಅದ್ಭುತ ದೇವಾಲಯವಿರುವುದು ಹುಲ್ಲೇಕೆರೆ ಗ್ರಾಮದಲ್ಲಿ ಎಂದರೆ ಅತಿಶಯೋಕ್ತಿಯಾಗಲಾರದು. ಆದರೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷೃ, ವಾಹನ ಸೌಕರ್ಯದ ಕೊರತೆ, ಸಮರ್ಪಕ ರಸ್ತೆ ಇತ್ಯಾದಿ ಕೊರತೆಗಳಿಂದಾಗಿ ಹೊಯ್ಸಳ ಕಾಲದ ಅದ್ಭುತ ಶಿಲ್ಪಕಲೆಯೊಂದು ತೆರೆಮರೆಗೆ ಸರಿಯುವುದೋ ಎಂಬ ಆತಂಕ ಸ್ಥಳೀಯರದ್ದಾಗಿದೆ.