ಹಲವು ವೈಶಿಷ್ಟೃಗಳ ಶ್ರೀಭಗವತಿ ದೇಗುಲ

ಹಲವು ವೈಶಿಷ್ಟೃಗಳ ಶ್ರೀಭಗವತಿ ದೇಗುಲ
Published on

ವಿನ್ಸೆಂಟ್ ಎಂ.ಬಿ. ಸುಂಟಿಕೊಪ್ಪ
ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಕೊಡಂಗಲ್ಲೂರು ಶ್ರೀ ಕುರುಂಭ ಭಗವತಿ ದೇವಸ್ಥಾನವು ಹಲವು ವೈಶಿಷ್ಟೃಗಳಿಗೆ ಸಾಕ್ಷಿಯಾಗಿದೆ. ಇಷ್ಟಾರ್ಥ ಈಡೇರಿಕೆ ಭಕ್ತರು ಹರಕೆ ಒಪ್ಪಿಸುವುದು ಇದಕ್ಕೊಂದು ಉದಾಹರಣೆಯಾಗಿದೆ. ದೇವಿಯಲ್ಲಿ ನಂಬಿಕೆಯಿಟ್ಟು ಭಕ್ತಿಯಿಂದ ಪ್ರಾರ್ಥಿಸಿದರೆ ಬೇಡಿದ್ದನ್ನು ಈಡೇರಿಸುತ್ತಾಳೆ ಎಂಬುದು ಭಕ್ತರ ನಂಬಿಕೆ.

ಸುಂಟಿಕೊಪ್ಪ ಪಟ್ಟಣದಿಂದ ಒಂದು ಕಿ.ಮೀ., ಮಡಿಕೇರಿಯಿಂದ 14 ಕೀ.ಮೀ. ದೂರದ ಗದ್ದೆಹಳ್ಳದಲ್ಲಿ ನೆಲೆ ನಿಂತಿರುವ ಕೊಡಂಗಲ್ಲೂರು ಭಗವತಿ ದೇವಿಯನ್ನು 6 ದಶಕಗಳಿಗೂ ಹೆಚ್ಚಿನ ಕಾಲದಿಂದ ಗುಡಿ ನಿರ್ಮಿಸಿ ಪೂಜಿಸಲಾಗುತ್ತಿದೆ.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭ ಅಕ್ಕ ಪಕ್ಕದ ನಿವಾಸಿಗಳು ಸುತ್ತ ಮುತ್ತಲ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ.

ದಿವಂಗತ ಪಿ.ವಿ.ರಾಮಕೃಷ್ಣ ಅವರಿಗೆ ಕೊಡಂಗಲ್ಲೂರು ಶ್ರೀ ಕುರುಂಭ ಭಗವತಿ ದರ್ಶನ ನೀಡಿ ಈ ಸ್ಥಳದಲ್ಲಿ ದೇವಾಲಯ ನಿರ್ಮಿಸಿ ಪೂಜೆ ನೆರವೇರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕೇರಳದ ತಂತ್ರಿಗಳ ಸಲಹೆ ಪಡೆದು ದೇವಾಲಯ ನಿರ್ಮಿಸಲಾಯಿತು. ದೇವಿಯ ಮಹಿಮೆ ಹೆಚ್ಚಾದ್ದರಿಂದ ದೇಗುಲಕ್ಕೆ ಭಕ್ತರ ಆಗಮಿಸುವ ಸಂಖ್ಯೆಯೂ ಹೆಚ್ಚಾಯಿತು. ಕೊಡಂಗಲ್ಲೂರು ಶ್ರೀ ಕುರುಂಭ ಭಗವತಿ ದೇವಿಯ ವಾರ್ಷಿಕೋತ್ಸವ ಸಂದರ್ಭದಲ್ಲಿ 1 ತಿಂಗಳು ವ್ರತ ಇದ್ದು, ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ರಾಮಕೃಷ್ಣ ಅವರ ಕಾಲಾನಂತರ ಅವರ ಧರ್ಮಪತ್ನಿ ಪಿ.ಕೆ.ಶಾಂತ ಹಾಗೂ ಹಿರಿಯಪುತ್ರ ಪಿ.ಆರ್.ಸುಕುಮಾರ್ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ದೇವರ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಗಣಪತಿ ಹೋಮ, ಮುತ್ತಪ್ಪ ದೇವರಿಗೆ ಪೈಂಗುತ್ತಿ, ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಗುಳಿಗನ ಪೂಜೆ, ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ ನಡೆದ ನಂತರ ಭಕ್ತರಿಗೆ ದೇವಿ ದರ್ಶನ ನೀಡುತ್ತದೆ. ತಲಪುರಿ ಮೆರವಣಿಗೆ ವಸೂರಿ ಮಾಲೆ ದೇವರ ಬೆಳ್ಳಾಟಂ ನಡೆಯುತ್ತದೆ. ಮತ್ತೊಮ್ಮೆ ದೇವಿ ದರ್ಶನ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯುತ್ತದೆ. ಮರುದಿನ ಭಕ್ತರು ದೇವಿಗೆ ಹರಕೆ ಸಲ್ಲಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net