ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಇಂದು

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಇಂದು
Published on

ಹನೂರು: ಸರ್ವಧರ್ಮ ಸಮನ್ವಯತೆಯನ್ನು ಸಾರುವ ಪಟ್ಟಣದ ಅಧಿದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವವು ಮಾ.24 ರಿಂದ ನಾಲ್ಕು ದಿನಗಳ ಕಾಲ ಜರುಗಲಿದ್ದು, ದೇಗುಲದ ಆಡಳಿತ ಮಂಡಳಿ ವತಿಯಿಂದ ಅಗತ್ಯ ಸಿದ್ಧತೆಗಳು ನಡೆದಿದೆ.

ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರೋತ್ಸವಕ್ಕೆ ತಮಿಳುನಾಡು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪಟ್ಟಣದಲ್ಲಿ ಎಲ್ಲ ಸಮುದಾಯದ ಜನರು ಹಬ್ಬವಾಗಿ ಆಚರಿಸುತ್ತಾರೆ. ಈಗಾಗಲೇ 15 ದಿನ ಮುಂಚಿತವಾಗಿಯೇ ತಮಟೆ ಸಾರುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಅರ್ಚಕರಿಗೆ ವಿಧಿ ವಿಧಾನಗಳ ಮೂಲಕ ಕಂಕಣ ಕಟ್ಟಲಾಗಿದೆ. ದೇಗುಲದ ಮುಂಭಾಗ ಅಗ್ನಿಕುಂಡ ಕಂಬವನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಮೇಲೆ ಮಣ್ಣಿನ ಮಡಕೆಯ ಕರಗವನ್ನು ಇಟ್ಟು ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಈ ಕಂಬವೇ ಬೆಟ್ಟಳ್ಳಿ ಮಾರಮ್ಮನ ಪತಿ ದೇವರು ಎಂಬ ಪ್ರತೀತಿ ಇದೆ. ಈ ಕಂಬ ಹಾಕಿದ ದಿನದಿಂದ ಪ್ರತಿ ದಿನ ರಾತ್ರಿ ರಂಗಕುಣಿತ ಪ್ರಾರಂಭವಾಗಿದ್ದು, ಪಟ್ಟಣದಲ್ಲಿ ಸಂಪೂರ್ಣ ಮಾಂಸ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಸಾಂಬಾರ ಪದಾರ್ಥಗಳ ಒಗ್ಗರಣೆ ನಿಲ್ಲಿಸಲಾಗಿದೆ. ಇದರಿಂದ ಪಟ್ಟಣದಲ್ಲಿ ಮಾಂಸದ ಅಂಗಡಿಗಳು, ಮಾಂಸಾಹಾರಿ ಹೋಟೆಲ್‌ಗಳು ಮುಚ್ಚಿದ್ದು, ಸಂಪೂರ್ಣವಾಗಿ ಮಾಂಸಾಹಾರ ರಹಿತ ಪಟ್ಟಣವಾಗಿ ಮಾರ್ಪಟ್ಟಿದೆ. ಪಟ್ಟಣದ ಮುಸ್ಲಿಮರು ಸಹ ಮಾಂಸಾಹಾರವನ್ನು ತ್ಯಜಿಸಿದ್ದು, ಜಾತ್ರೆಗೆ ಸಂಪೂರ್ಣ ಸಹಕಾರ ನೀಡಿರುವುದರ ಮೂಲಕ ಸಾಮರಸ್ಯತೆಯನ್ನು ಮೆರೆದಿದ್ದಾರೆ. ಜಾತ್ರೋತ್ಸವಕ್ಕೆ ದೇಗುಲದ ಆಡಳಿತ ಮಂಡಳಿ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಾತ್ರೆಯಲ್ಲಿ ಯಾವತ್ತು, ಏನೇನು?: ಹಬ್ಬದ ಮೊದಲ ದಿನ ಮಾ.24 ರಂದು ತಡರಾತ್ರಿ ಜಾಗರ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಭಕ್ತರು ಮನೆಗಳಲ್ಲಿ ವಾರದ ಮುಂಚೆಯಿಂದಲೇ ಪ್ರತಿನಿತ್ಯ ನೀರುಣಿಸಿ ಪೂಜೆ ಸಲ್ಲಿಸುವುದರ ಮೂಲಕ ಬೆಳೆಸಿದ ಧಾನ್ಯಗಳ ಪೈರುಗಳನ್ನು (ಜಾಗರ) ಬೆಳೆಸಲಾಗಿರುತ್ತದೆ. ತಡರಾತ್ರಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಜಾಗರವನ್ನು ಹೊತ್ತು ವಾದ್ಯಮೇಳದೊಂದಿಗೆ ಮೆರವಣಿಗೆಯ ಮೂಲಕ ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಸಮರ್ಪಿಸುತ್ತಾರೆ. 25 ರಂದು ತಂಪುಜ್ಯೋತಿ ಕಾರ್ಯಕ್ರಮ ನಡೆಯಲಿದ್ದು, ಪಟ್ಟಣದ ವಿವಿಧ ಬಡಾವಣೆಯಿಂದ ಭಕ್ತರು ದೇವಿಗೆ ತಂಪುಜ್ಯೋತಿಯನ್ನು (ತಂಬಿಟ್ಟು) ಅರ್ಪಿಸಲಾಗುತ್ತದೆ. ಮಧ್ಯಾಹ್ನ ತೇರಿನ ಉತ್ಸವವು ದೇಗುಲದ ಸುತ್ತ ಜರುಗಲಿದೆ. 26 ಬಾಯಿಬೀಗ ನಡೆಯಲಿದ್ದು, ಈಗಾಗಲೇ ಪಟ್ಟಣದಲ್ಲಿ 102 ಭಕ್ತರು ಬಾಯಿಬೀಗ ಹಾಕಿಸಿಕೊಳ್ಳುವುದಕ್ಕೆ ಹರಕೆ ಹೊತ್ತಿದ್ದು, ಮಾಲೆಯನ್ನು ಧರಿಸಿ ಪ್ರತಿನಿತ್ಯ ದೇಗುಲದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಸುಮಾರು 20 ಅಡಿ ಸರಳಿನಿಂದ ಬಾಯಿಬೀಗವನ್ನು ಹಾಕಿಕೊಳ್ಳುವ ಮೂಲಕ ಹರಕೆಯನ್ನು ತೀರಿಸಲಿದ್ದಾರೆ. 27ರಂದು ಅಗ್ನಿಕುಂಡ ದರ್ಶನ ಕಾರ್ಯಕ್ರಮವಿದ್ದು, ಪ್ರಾತಃಕಾಲದಲ್ಲಿ ಬೆಟ್ಟಳ್ಳಿ ಮಾರಮ್ಮನಿಗೆ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ ಅಗ್ನಿಕುಂಡವನ್ನು ಎತ್ತಲಾಗುತ್ತದೆ. ಈ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. ಜಾತ್ರಾ ಮಹೋತ್ಸವಕ್ಕೆ ದೇಗುಲದ ಆಡಳಿತ ಮಂಡಳಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಪೊಲೀಸ್ ಬಂದೋಬಸ್ತ್: ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಇನ್ಸ್‌ಪೆಕ್ಟರ್ ಆನಂದಮೂರ್ತಿ ಅಧ್ಯಕ್ಷತೆಯಲ್ಲಿ ವಿವಿಧ ಕೋಮಿನ ಮುಖಂಡರ ಸಭೆ ನಡೆಸಿದ್ದು, ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಲಾಗಿದೆ. ಸ್ವಚ್ಛತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net