

ಶನಿವಾರಸಂತೆ: ಸಮೀಪದ ಗೋಪಾಲಪುರದ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನದ 26ನೇ ವಾರ್ಷಿಕ ಪೂಜಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು.
ಎರಡು ದಿನದವರೆಗೆ ಜರುಗಿದ ಪೂಜಾ ಮಹೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ಶ್ರೀ ಅಮ್ಮನವರಿಗೆ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ ಮುಂತಾದ ಪೂಜೆಗಳು ನಡೆದವು. ನಂತರ ಜರುಗಿದ ಸುಗ್ಗಿ ಕುಣಿತ ಮತ್ತು ಸಿಡಿಮದ್ದು ಪ್ರದರ್ಶನ ಗಮನ ಸೆಳೆಯಿತು.
ಬುಧವಾರ ಮುಂಜಾನೆ 5 ಗಂಟೆಗೆ ಶ್ರೀ ಬನಶಂಕರಿ ಅಮ್ಮನವರ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇಟ್ಟು ವಾದ್ಯಗೋಷ್ಠಿ, ವೀರಗಾಸೆ ಕುಣಿತದೊಂದಿಗೆ ದೇವರನ್ನು ಗಂಗಾಸ್ನಾನಕ್ಕೆ ಕೊಂಡೊಯ್ಯಲಾಯಿತು. ನಂತರ ಪಂಚಕಲಶದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ 9 ಗಂಟೆಗೆ ಕೆಂಡೋತ್ಸವ ನಡೆಸಲಾಯಿತು. ಬಳಿಕ ಬೆಳಗ್ಗೆ 10 ಗಂಟೆಗೆ ಮೂಲ ದೇವಾಲಯವನ್ನು ಪ್ರವೇಶಿಸಿದ ಬಳಿಕ ಶ್ರೀ ಅಮ್ಮನವರಿಗೆ ಕುಂಕುಮಾರ್ಚನೆ, ಮಹಾ ಮಂಗಳಾರತಿ, ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಪ್ರಧಾನ ಅರ್ಚಕ ಪ್ರಸನ್ನ ಭಟ್ ಅವರ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿವಿಧಾನ ನೆರವೇರಿಸಿದರು.