

ಬದಿಯಡ್ಕ: ಭಜನಾ ಮಂದಿರ ಸಮಾಜವನ್ನು ಒಗ್ಗೂಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲ ಸ್ತರದ ಜನರು ಯಾವುದೇ ಭೇದ-ಭಾವ ಕಾಣದೆ ದೇವರನ್ನು ಭಜಿಸಿದಾಗ ಸಕಾರಾತ್ಮಕ ಚಿಂತನೆ ಬೆಳೆಯುತ್ತವೆ. ಧಾರ್ಮಿಕ ಕ್ಷೇತ್ರಗಳ ಪುನರುತ್ಥಾನಕ್ಕೆ ನಾಡಿನ ಎಲ್ಲ ಜನರು ದೈಹಿಕ, ಆರ್ಥಿಕವಾಗಿ ಕೈಜೋಡಿಸಬೇಕೆಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಪಜ್ಜ ಕೊಲ್ಲಂಗಾನ ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನಃನಿರ್ಮಾಣ ಸಮಿತಿ ವತಿಯಿಂದ ಭಾನುವಾರ ನಡೆದ ಧಾರ್ಮಿಕ ಸಭೆ, ನಿಧಿ ಸಂಚಯನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನಃನಿರ್ಮಾಣ ಸಮಿತಿ ರಕ್ಷಾಧಿಕಾರಿ ಶ್ರೀನಾಥ್ ಕೊಲ್ಲಂಗಾನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವಾಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿ ಅನುಗ್ರಹ ಮಾತುಗಳನ್ನಾಡಿ, ಪ್ರತಿಯೊಬ್ಬ ವ್ಯಕ್ತಿಯ ಆಂತರಂಗಿಕ ನೆಮ್ಮದಿಗೆ ಧಾರ್ಮಿಕ ಕಾರ್ಯ ಪ್ರಮುಖವಾದುದು. ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಜನರು ಒಗ್ಗೂಡುವ ಭಜನಾ ಮಂದಿರದ ಪುನಃನವೀಕರಣಕ್ಕೆ ತೊಡಗಿರುವುದು ಅತ್ಯುತ್ತಮ ವಿಚಾರ ಎಂದು ತಿಳಿಸಿದರು.
ಮಧೂರು ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ., ಜನಪರ ವೈದ್ಯ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ನಿವೃತ್ತ ಪೊಲೀಸ್ ಅಧಿಕಾರಿ ಹರಿಶ್ಚಂದ್ರ ನಾಯ್ಕ, ಆಡಿಟರ್ ಗೋಪಾಲಕೃಷ್ಣ ಮೇಗಿನಡ್ಕ, ಜನ ಪ್ರತಿನಿಧಿ ಕೆ.ಶ್ಯಾಮಪ್ರಸಾದ ಮೇಗಿನಡ್ಕ, ರೈಲ್ವೆ ನಿವೃತ್ತ ಅಧಿಕಾರಿ ಐತ್ತಪ್ಪ ನಾಯ್ಕ ಮರ್ಧಂಬೈಲು, ನಿವೃತ್ತ ಮುಖ್ಯಶಿಕ್ಷಕ ಶಿವರಾಮ ಪಿ.ವಿ., ಎಡಪ್ಪರಂಬ ಶಾಲಾ ಮುಖ್ಯಶಿಕ್ಷಕ ಸದಾಶಿವ ಶರ್ಮ ಪಜ್ಜ, ನಿವೃತ್ತ ಕೃಷಿ ಇಲಾಖೆ ಅಧಿಕಾರಿ ರಮೇಶ್ ನಾಯ್ಕ, ಸ್ಥಳದಾನಗೈದ ಬಾಬು ನಾಯ್ಕ ಪಾಲ್ಗೊಂಡಿದ್ದರು. ಶ್ರೀ ಅಯ್ಯಪ್ಪ ಭಜನಾ ಮಂದಿರ ಪುನಃನಿರ್ಮಾಣ ಸಮಿತಿ ಅಧ್ಯಕ್ಷ ತಿರುಮಲೇಶ್ವರ ಭಟ್ ಪಜ್ಜ ಸ್ವಾಗತಿಸಿದರು. ಕಾರ್ಯದರ್ಶಿ ವಾಮನ ನಾಯ್ಕ ಆರಂತೋಡು ವಂದಿಸಿದರು. ಪುರುಷೋತ್ತಮ ಭಟ್ ಪುದುಕೋಳಿ ಕಾರ್ಯಕ್ರಮ ನಿರೂಪಿಸಿದರು.
ದಾನಿಗಳು ಧನ ಸಹಾಯದ ವಾಗ್ದಾನ ನೀಡಿದರು. ನಿಧಿ ಸಂಗ್ರಹ ಕೂಪನ್ ವಿತರಿಸಲಾಯಿತು. ದೀಕ್ಷಾ, ಸಾತ್ವಿಕ್, ಋಷಿಕ್ ಪ್ರಾರ್ಥನೆ ಹಾಡಿದರು. ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.