

ಅರಕಲಗೂಡು: ತಾಲೂಕಿನ ಕೇರಳಾಪುರ ಗ್ರಾಮದ ಪ್ರಸಿದ್ಧ ಶ್ರೀ ಶ್ರೀನಿವಾಸ ಆಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಪೂಜಾ ವಿಧಾನಗಳು ವಿಧಿವತ್ತಾಗಿ ಸಾಗಿದವು. ಮೂಲ ದೇವರ ಮೂರ್ತಿಗೆ ಹೂವಿನಿಂದ ಅಲಂಕರಿಸಿ ತುಪ್ಪದ ಅಭಿಷೇಕ, ರುದ್ರಾಭಿಷೇಕ, ಎಳನೀರು ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಗುರುವಾರ ಬೆಳಗಿನಿಂದ ವಿಶೇಷ ಪೂಜೆ ಬಳಿಕ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊರತಂದು ದೇವಸ್ಥಾನ ಸುತ್ಯ ಪ್ರದಕ್ಷಿಣೆ ಹಾಕಿಸಿ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ನೆರೆದಿದ್ದ ಭಕ್ತರು ಜಯ ಘೋಷಗಳೊಂದಿಗೆ ತೇರು ಎಳೆದು ಸಂಭ್ರಮಿಸಿದರು. ರಥ ಬೀದಿಯಲ್ಲಿ ಸಾಗಿದ ತೇರಿಗೆ ಭಕ್ತರು ನಮಿಸಿ ಭಕ್ತಿ ಪರಾಕಾಷ್ಠೆ ಮೆರೆದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಭಕ್ತರು ಪ್ರಸಾದ ಸ್ವೀಕರಿಸಿದರು.