

ಕಾರವಾರ: ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಭೂ ಕುಸಿತ ಪ್ರದೇಶಗಳಲ್ಲಿ ವೀಕ್ಷಕರನ್ನು ನೇಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಸಂಬಂಧ ಸಿಬ್ಬಂದಿಯನ್ನು ಗುರುತಿಸಿಕೊಡುವಂತೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಪತ್ರ ಬರೆದಿರುವುದಾಗಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.
ವಿಜಯವಾಣಿ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 439 ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಬಹುದು ಎಂದು ಹಿಂದೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ(ಜಿಎಸ್‌ಐ) ಅಧ್ಯಯನ ಮಾಡಿ ವರದಿ ನೀಡಿತ್ತು. ಅಲ್ಲದೇ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಇನ್ನೊಂದು ವರದಿ ನೀಡಿದ್ದು, ಅದರಲ್ಲೂ ಜಿಎಸ್‌ಐ ನೀಡಿದ ಸ್ಥಳಗಳೂ ಸೇರಿವೆ. ಅಂಥ ಅಪಾಯಕಾರಿ ಸ್ಥಳಗಳಲ್ಲಿ ಭೂ ಕುಸಿತದ ಅಪಾಯಗಳನ್ನು ಮೊದಲೇ ಗುರುತಿಸಿ, ಜನ, ಜಾನುವಾರುಗಳ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ಕಂದಾಯ, ಅರಣ್ಯ ಹಾಗೂ ಗ್ರಾಮ ಪಂಚಾಯಿತಿಯಿಂದ ಜನರನ್ನು ನೇಮಿಸಲು ಕ್ರಮ ವಹಿಸಲಾಗುತ್ತಿದೆ. ಅವರು ಕಾಲ ಕಾಲಕ್ಕೆ ಗುಡ್ಡ ಕುಸಿಯಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ, ಸಂಬಂಧಪಟ್ಟವರಿಗೆ ವರದಿ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಆ.6 ರಂದು ಇಲಾಖೆಗಳ ಅಧಿಕಾರಿಗಳ ಜತೆಗೆ ಈ ಸಂಬಂಧ ವಿಡಿಯೋ ಸಂವಾದ ಸಭೆ ನಡೆಸಿ, ಚರ್ಚಿಸಲಾಗುವುದು. ನಂತರ ಸ್ಪಾಟರ್‌ಗಳಾಗಿ ನೇಮಕವಾದವರಿಗೆ ಜಿಎಸ್‌ಐದಿಂದ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜನರ ಓಡಾಟಕ್ಕೂ ಅವಕಾಶ ಕಲ್ಪಿಸಬೇಕು. ಅಪಾಯವೂ ಉಂಟಾಗಬಾರದು ಎಂಬ ಕಾರಣಕ್ಕೆ ಈ ಕ್ರಮ ವಹಿಸಲಾಗಿದೆ. ಈಗಾಗಲೇ ಜಿಎಸ್‌ಐ ಸೂಚನೆಯಂತೆ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ವೀಕ್ಷಕರು (ಸ್ಪಾಟರ್) ನೇಮಿಸಲಾಗಿದೆ.66 ರ ಹೆದ್ದಾರಿಯುದ್ದಕ್ಕೂ ಇನ್ನೂ ಕೆಲವು ಸ್ಥಳಗಳಲ್ಲಿ ಸ್ಪಾಟರ್‌ಗಳನ್ನು ನೇಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದರು.
ಯಲ್ಲಾಪುರದ ಕಳಚೆ ಭಾಗದಲ್ಲಿ ಭೂ ಕುಸಿತವಾದ ಸ್ಥಳ ಭೇಟಿ ನಡೆಸಿ ಪರಿಶೀಲನೆ ನಡೆಸಿ,ವರದಿ ನೀಡುವಂತೆ ಎಸಿ, ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಕೈಗೊಳ್ಳಬೇಕಾದ ಶಾಶ್ವತ ಪರಿಹಾರ ಕ್ರಮಗಳ ಬಗ್ಗೆ ಮುಂದೆ ಚಿಂತನೆ ನಡೆಸಲಾಗುವುದು ಎಂದು ವಿವರಿಸಿದರು.
ಗುಡ್ಡ ಕುಸಿತದ ತಾಲೂಕುವಾರು
ಜಿಎಸ್‌ಐ ವರದಿಯಂತೆ ಅಂಕೋಲಾ ತಾಲೂಕಿನಲ್ಲಿ 39, ಭಟ್ಕಳ-1, ಹಳಿಯಾಳ-13, ಹೊನ್ನಾವರ-92, ಜೊಯಿಡಾ-56, ಕಾರವಾರ-34, ಕುಮಟಾ-48, ಮುಂಡಗೋಡ-1, ಸಿದ್ದಾಪುರ-58, ಶಿರಸಿ-59 ಯಲ್ಲಾಪುರ-38 ಸೇರಿ ಅಪಾಯಕಾರಿ ಗುಡ್ಡ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ.
ಅಪಾಯದಲ್ಲಿರುವ ಶಾಲೆ, ಅಂಗನವಾಡಿಗಳ ಪಟ್ಟಿ ತರಿಸಿಕೊಳ್ಳಲಾಗಿದೆ. ಅಲ್ಲಿ ಮರಗಳು ಕಡಿಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಸಣ್ಣ ಪುಟ್ಟ ರಿಪೇರಿ ಕಾರ್ಯಗಳಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಹಣ ಬಿಡುಗಡೆ ಮಾಡಲಾಗುತ್ತಿದೆ. ಗಂಭೀರ ಸಮಸ್ಯೆ ಇದ್ದಲ್ಲಿ ಮಕ್ಕಳನ್ನು ಸ್ಥಳಾಂತರಿಸುವ, ರಜೆ ನೀಡುವ ಅಧಿಕಾರವನ್ನು ಆಯಾ ಬಿಇಒಗಳಿಗೆ ನೀಡಲಾಗಿದೆ.
ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾಧಿಕಾರಿ, ಉತ್ತರ ಕನ್ನಡ