

ಚಳ್ಳಕೆರೆ: ನಾಯಕತ್ವ ಗುಣ ಬೆಳೆಸುವ ಕ್ರೀಡಾ ಚಟುವಟಿಕೆಗಳ ಆಯೋಜನೆಯಲ್ಲಿ ಪಾರದರ್ಶಕತೆ ಅಗತ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಬಿಎಂಜಿಎಚ್‌ಎಸ್ ಶಾಲಾ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಪ್ರೌಢಶಾಲೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಗ್ರಾಮ, ವಿದ್ಯೆ ಕಲಿತ ಶಾಲೆಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬೇಕು. ಪ್ರಶಸ್ತಿ ಗಳಿಕೆಗಷ್ಟೇ ಆಟ ಆಡದೆ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕರು, ಪ್ರತಿ ಶಾಲಾ ಮಕ್ಕಳನ್ನು ಸಮಾನವಾಗಿ ನೋಡುವ ವೃತ್ತಿ ಧರ್ಮ ಇರಬೇಕು. ಅರ್ಹತೆ ಇರುವ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಮೂಲಕ ಮುಖ್ಯ ವಾಹಿನಿಗೆ ತರಬೇಕು. ಸ್ವಾರ್ಥ ಮತ್ತು ಪ್ರತಿಷ್ಠೆಗಾಗಿ ಗೆಲುವಿನ ಹಾದಿ ತುಳಿಯಬಾರದು. ಊರಿಂದ ಹೊರಗೆ ಬಂದ ಕ್ರೀಡಾಪಟುಗಳಲ್ಲಿ ಅನಾಥ ಭಾವ ಬಾರದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ಕ್ರೀಡಾ ಚಟುವಟಿಕೆಗಳನ್ನು ಪ್ರೌಢ-ಪ್ರಾಥಮಿಕ ಭಾಗವಾಗಿ ಮಾಡಿಕೊಳ್ಳಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಕೆ.ವೀರಭದ್ರಯ್ಯ, ಪರಶುರಾಂಪುರ ಘಟಕದ ಅಧ್ಯಕ್ಷ ಶಶಿಧರ, ದೈಹಿಕ ಶಿಕ್ಷಣ ಪರಿವೀಕ್ಷಕ ಯು.ಸುನೀಲ್‌ನಾಯ್ಕ, ಡಿ.ಟಿ.ಶ್ರೀನಿವಾಸನ್, ಜಿ.ಟಿ.ವೀರಭದ್ರನಾಯಕ ಇದ್ದರು.