

ತುಮಕೂರು: ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಏಕಾಗ್ರತೆ, ನಿರಂತರ ಪ್ರಯತ್ನದ ಜತೆಗೆ ಹಠದ ಹಸಿವು ಅಗತ್ಯವೆಂದು ಜಿಪಂಸಿಇಒ ಜಿ.ಪ್ರಭು ಹೇಳಿದರು.
ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಕ್ರೀಡಾ ವಸತಿ ಶಾಲಾ ಕ್ರೀಡಾಪಟುಗಳಿಗಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕ್ರೀಡಾ ಕಿಟ್ ವಿತರಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿರಂತರ ಪ್ರಯತ್ನದಿಂದ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ವಿಶ್ವದಲ್ಲಿರುವ ಸುಮಾರು 900 ಕೋಟಿ ಜನಸಂಖ್ಯೆಯಲ್ಲಿ ಶೇ.15ಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಭಾರತ ದೇಶವು ಉತ್ತಮ ಕ್ರೀಡಾ ಸಾಧಕರನ್ನು ಹೊಂದಿರುವ ರಾಷ್ಟ್ರವೆನಿಸಿಕೊಂಡಿದೆ. ಕ್ರೀಡಾ ಸಾಧಕರನ್ನು ಆದರ್ಶವಾಗಿರಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್. ರೋಹಿತ್ ಗಂಗಾಧರ್ ಮಾತನಾಡಿ, 92 ಕ್ರೀಡಾಪಟುಗಳಿಗೆ ಕಿಟ್ ವಿತರಣೆ ಮಾಡಲಾಗುತ್ತಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಮ್ನಾಸ್ಟಿಕ್ ತರಬೇತಿದಾರ ಸುಧೀರ್ ದೇವದಾಸ್, ಕಬಡ್ಡಿ ತರಬೇತಿದಾರ ಮೊಹಮದ್ ಇಸ್ಮಾಯಿಲ್, ಅಥ್ಲೆಟಿಕ್ ತರಬೇತಿದಾರ ಶಿವ ಪ್ರಸಾದ್, ಜಿಲ್ಲಾ ಕ್ರೀಡಾ ಶಾಲಾ ವಸತಿ ನಿಲಯ ಕ್ಷೇಮ ಪಾಲಕರಾದ ಎಂ. ಶಿಲ್ಪಾ ಶ್ರೀ ಹಾಗೂ ಮಂಜುಳಮ್ಮ, ದ್ವೀತಿಯ ದರ್ಜೆ ಸಹಾಯಕ ಮಂಜುನಾಥ್ ಮತ್ತಿತರರು ಹಾಜರಿದ್ದರು.