ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆ ಮುಖ್ಯ

24-kkr1(6-24
Published on

ಕಿಕ್ಕೇರಿ: ಮಕ್ಕಳ ಸಮಗ್ರ ಶಿಕ್ಷಣಕ್ಕೆ ವಿಶೇಷವಾಗಿ ಕಾಳಜಿ ವಹಿಸಿ ಅವರ ಭವಿಷ್ಯವನ್ನು ಮುನ್ನೆಲೆಗೆ ತರಲು ಶ್ರಮಿಸಿ ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.


ಹೋಬಳಿಯ ಮಾದಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ವಸತಿ ಶಾಲೆ ಉತ್ತಮ ಪರಿಸರದಲ್ಲಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ಖುಷಿಯ ವಿಷಯ. ಪ್ರಸಕ್ತ ಸಾಲಿನಲ್ಲಿ ಉತ್ತಮ ಫಲಿತಾಂಶ ಲಭಿಸಿರುವುದು ಸಂತಸ. ಮುಂದಿನ ದಿನದಲ್ಲಿ ಶೇ.100 ಫಲಿತಾಂಶ ಲಭಿಸುವಂತೆ ಮಕ್ಕಳನ್ನು ಹುರಿದುಂಬಿಸಿ. ಶಾಲೆಯಲ್ಲಿ ಗೈರಾಗದಂತೆ ಶಿಕ್ಷಕರು, ನಿಲಯಪಾಲಕರು ಕಾರ್ಯನಿರ್ವಹಿಸಿ ಎಂದರು.


ಮಕ್ಕಳಿಗೆ ಶಿಕ್ಷಣದಷ್ಟೇ ಕ್ರೀಡೆ ಮುಖ್ಯವಾಗಿದೆ. ವಿಶಾಲವಾದ ಮೈದಾನವಿದ್ದು ಮಕ್ಕಳಿಗೆ ಕ್ರೀಡೆಯಲ್ಲಿ ಅಭಿರುಚಿ ಮೂಡಿಸಿ. ತಾಲೂಕಿನಲ್ಲಿ ಉತ್ತಮವಾದ ವಸತಿ ಶಾಲೆ ಎಂಬ ಹೆಸರಿದ್ದು ಆಹಾರದಲ್ಲಿ ಯಾವುದೇ ರೀತಿ ಸಮಸ್ಯೆ ಇಲ್ಲದಂತೆ ಗುಣಮಟ್ಟ, ಶುಚಿಗೆ ಒತ್ತು ನೀಡಿ ಎಂದು ಹೇಳಿದರು.
ಪ್ರಾಂಶುಪಾಲೆ ಶಾಂತಿ ಮಾತನಾಡಿ, ಸುತ್ತಮುತ್ತಲ ಪ್ರದೇಶದಲ್ಲಿ ಗುಡ್ಡಗಾಡು, ಹಸಿರು ಪ್ರದೇಶವಿದೆ. ಆಗಿಂದಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳ ಸುರಕ್ಷತೆ ಅವಶ್ಯವಿದೆ. ಕಾಂಪೌಂಡ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.


ಮಕ್ಕಳಿಗೆ ಹಾಸಿಗೆ, ದಿಂಬು ಮತ್ತಿತರ ಸಾಮಗ್ರಿ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷ ಕೋಟಹಳ್ಳಿ ಕುಮಾರ್, ಮುಖಂಡರಾದ ಐಕನಹಳ್ಳಿ ಕೃಷ್ಣೇಗೌಡ, ಕಾಯಿ ಮಂಜೇಗೌಡ, ಕಡಹೆಮ್ಮಿಗೆ ರಮೇಶ್, ಕಾಂತರಾಜ್, ಶೇಖರ್, ಶಿಕ್ಷಕ ವೃಂದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net