ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

FotoJet (1)
Published on

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಅನಿಸಿಕೆ

ರಾಮನಗರ : ಒತ್ತಡ ನಿವಾರಣೆಗೆ ಕ್ರೀಡೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ತಿಳಿಸಿದರು.

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ನೌಕರರು ಸಾಕಷ್ಟು ಒತ್ತಡದಲ್ಲಿರುತ್ತಾರೆ. ಆದರೆ ಸರ್ಕಾರದ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಅಧಿಕಾರಿ, ಸಿಬ್ಬಂದಿ ಮಾನಸಿಕವಾಗಿ ಸ್ವಸ್ಥರಾಗಿರಬೇಕು. ಅದಕ್ಕಾಗಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಒತ್ತಡ ನಿವಾರಣ ಕ್ರಮಗಳನ್ನು ಅನುಸರಿಸಿ, ಆರೋಗ್ಯವಾಗಿರಬೇಕು ಎಂದರು.

ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ಮನಸ್ಸಿಗೆ ಆಹ್ಲಾದಕರ ಭಾವ ಮೂಡುತ್ತದೆ, ವಿಶೇಷವಾಗಿ ಒತ್ತಡ ಶಮನಗೊಳ್ಳುತ್ತದೆ. ರಾಜ್ಯಮಟ್ಟದ ಕ್ರೀಡಾಕೂಟ ಶಿವಮೊಗ್ಗದಲ್ಲಿ ನಡೆಯಲಿದ್ದು, ಎಲ್ಲರೂ ಉತ್ತಮ ಪ್ರದರ್ಶನ ತೋರಬೇಕು ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಮಾತನಾಡಿದರು.

ಅಥ್ಲೆಟಿಕ್ಸ್, ಶಾಟ್‌ಪಟ್, ಜಾವೆಲಿನ್, ರಿಲೇ, ತಟ್ಟೆ ಎಸೆತ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಾನಪದ ನೃತ್ಯ, ಗೀತಗಾಯನ, ಭರತನಾಟ್ಯ, ಗುಂಪು ಆಟಗಳಲ್ಲಿ ಕ್ರಿಕೆಟ್, ವಾಲಿಬಾಲ್, ಥ್ರೋಬಾಲ್, ಕಬಡ್ಡಿ ಸೇರಿ ಇತರ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ, ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಜೇಗೌಡ, ಖಜಾಂಚಿ ಜಗದೀಶ್, ಗೌರವಾಧ್ಯಕ್ಷ ಕಾಂತರಾಜು, ಮಾಗಡಿ ತಾಲೂಕು ಅಧ್ಯಕ್ಷ ಜಯರಾಮ್, ಚನ್ನಪಟ್ಟಣ ಸುಧೀಂದ್ರ, ಕನಕಪುರ ನಂದೀಶ್, ಹಾರೋಹಳ್ಳಿ ಎಸ್.ಪಿ.ಗೌಡ, ಹಿರಿಯ ಉಪಾಧ್ಯಕ್ಷ ಭೈರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್, ಶಿವಸ್ವಾಮಿ, ದೀಪಕ್, ಪ್ರದೀಪ್, ರಂಗಸ್ವಾಮಿ, ರಾಮಸ್ವಾಮಿ, ರಂಗಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net