

ಮದ್ದೂರು:ವಿದ್ಯಾರ್ಥಿಗಳು ಸೋಲು, ಗೆಲುವು ಲೆಕ್ಕಾಚಾರ ಹಾಕದೆ ಕ್ರೀಡೆಯಲ್ಲಿ ಭಾವಹಿಸುವ ಮೂಲಕ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಧನಂಜಯ ತಿಳಿಸಿದರು.
ತಾಲೂಕಿನ ಆತಗೂರು ಹೋಬಳಿಯ ಮಲ್ಲನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ದೈಹಿಕ ಶಿಕ್ಷಣ ವಿಭಾಗ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಪನಕುಪ್ಪೆ ವತಿಯಿಂದ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ಆತಗೂರು ವೃತ್ತ ಹಾಗೂ ಹೋಬಳಿ ಮಟ್ಟದ 14 ವರ್ಷ ವಯೋಮಾನದ ಬಾಲಕ, ಬಾಲಕಿಯರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಬಹುದು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಬೇಕು. ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಪಾಲಕರಿಗೆ ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.
ಕ್ರೀಡಾಕೂಟದಲ್ಲಿ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ಗೆದ್ದವರು ಬಹುಮಾನ ಪಡೆದರೆ, ಸೋತವರು ಕ್ರೀಡಾ ಸ್ಫೂರ್ತಿ ಮೆರೆದರು.
ಗ್ರಾಪಂ ಅಧ್ಯಕ್ಷ ಗಿರಿಯಯ್ಯ, ಉಪಾಧ್ಯಕ್ಷ ವಾಸುದೇವ್, ಮಾಜಿ ಅಧ್ಯಕ್ಷರಾದ ಇಂದ್ರಮ್ಮ, ಡಿ.ರವಿಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಡಿ.ಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಮಹದೇವಪ್ರಸಾದ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಮುಖ್ಯ ಶಿಕ್ಷಕ ನಾಗರಾಜು ಇದ್ದರು.