

ಗೋಣಿಕೊಪ್ಪ: ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಸವಿತಾ ಸಮಾಜದ ವತಿಯಿಂದ 2ದಿನಗಳ ಕಾಲ ಹಮ್ಮಿಕೊಂಡಿದ್ದ ಕ್ರೀಡೋತ್ಸವ ಮಂಗಳವಾರ ವರ್ಣರಂಜಿತ ತೆರೆ ಕಂಡಿತು.
ಕ್ರೀಡೋತ್ಸವದ ಅಂಗವಾಗಿ 10 ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ವಿರಾಜಪೇಟೆಯ ಡೋಮಿನೇರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೂಡಿಗೆಯ ಎಚ್‌ಆರ್‌ಬಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ವಿಜೇತ ತಂಡಕ್ಕೆ 30 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 20 ಸಾವಿರ ನಗದು, ಟ್ರೋಫಿ, ಸವಿತಾ ಸಮಾಜ ಪೊನ್ನಂಪೇಟೆ ಬಿ ತಂಡ ತೃತೀಯ ಬಹುಮಾನ ಪಡೆದು 10 ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.
ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಆಯೋಜಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಸವಿತಾ ಸಮಾಜ ಕೈಕೇರಿ ಎ ತಂಡ ಪ್ರಥಮ ಸ್ಥಾನ, ಸವಿತಾ ಸಮಾಜ ಪೊನ್ನಂಪೇಟೆ ಎ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಸವಿತಾ ಸಮಾಜ ಕೈಕೇರಿ ಎ ತಂಡ ಪ್ರಥಮ, ಸವಿತಾ ಸಮಾಜದ ಕೈಕೇರಿ ಬಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು. ಮಕ್ಕಳಿಗೆ ವಿವಿಧ ಕ್ರೀಡಾ ಚಟುವಟಿಕೆ ಆಯೋಜಿಸಲಾಗಿತ್ತು.
ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಪೂಣಚ್ಚೀರ ಎಸ್.ಮನೋಜ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ರಾಜ್ಯ ಸವಿತಾ ಸಮಾಜದ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಸಮುದಾಯದವರು ಸಂಘಟನಾತ್ಮಕವಾಗಿ ಮುಂದುವರಿಯುವ ಮೂಲಕ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಜಿಮ್ಮ ಸುಬ್ಬಯ್ಯ ಮಾತನಾಡಿದರು. ಸವಿತಾ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್, ಉಪಾಧ್ಯಕ್ಷ ನಾಯಂದರ ಆರ್.ಶಿವಾಜಿ, ಪಟ್ರಂಗಡ ಧನಿರತನ್, ವೇದಪಂಡ ಬಿದ್ದಪ್ಪ ಇದ್ದರು.