

ಗೋಕರ್ಣ: ಉತ್ತಮ ಮತ್ತು ಪರಿಪೂರ್ಣ ಶಿಕ್ಷಣಕ್ಕೆ ದೈಹಿಕ ಮತ್ತು ಮಾನಸಿಕ ಸಮತೋಲನ ಬಹು ಪ್ರಧಾನವಾದುದು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಈ ಸಮತೋಲನವನ್ನು ಕ್ರೀಡೆಗಳು ಒದಗಿಸುತ್ತವೆ ಎಂದು ಹಿರೇಗುತ್ತಿ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹೊನ್ನಪ್ಪ ನಾಯಕ ಹೇಳಿದರು.
ಶನಿವಾರ ಹಿರೇಗುತ್ತಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ ಮಾತನಾಡಿ, ಶಾಲೆಯಲ್ಲಿ ಆಯೋಜಿಸಲಾಗುವ ವಿವಿಧ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಕಲಿಸುವುದರಷ್ಟೇ ಮಹತ್ವ ಪಡೆದಿವೆ ಎಂದರು.
ಅಧ್ಯಕ್ಷತೆ ವಹಿಸಿ ಗ್ರಾಪಂ ಅಧ್ಯಕ್ಷ ಶಾಂತ ಎನ್. ನಾಯಕ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಿವಾನಂದ ನಾಯಕ ಮಾತನಾಡಿದರು.ದೈಹಿಕ ಶಿಕ್ಷಕ ನಾಗರಾಜ ನಾಯಕ ಕಾರ್ಯಕ್ರಮ ಸಂಘಟಿಸಿ ಪ್ರತಿಜ್ಞಾವಿಧಿ ಬೋಧಿಸಿದರು.
ಜಿಲ್ಲಾ ದೈಹಿಕ ಪರಿವೀಕ್ಷಕ ಪ್ರಕಾಶ ನಾಯಕ, ಹಿರೇಗುತ್ತಿ ಆರ್ಎಫ್ಒ ಪ್ರವೀಣ ನಾಯಕ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೋಹನ ಬಿ.ಕೆರೆಮನೆ, ಸದಸ್ಯ ಎನ್.ಟಿ. ನಾಯಕ, ಪ್ರಾಚಾರ್ಯ ನಾಗರಾಜ ಗಾಂವಕರ, ಸಣ್ಣಪ್ಪ ನಾಯಕ, ಉದ್ದಂಡ ಗಾಂವಕರ,ಉಮೇಶ ಗಾಂವಕರ ಇದ್ದರು. ಮುಖ್ಯೋಪಾಧ್ಯಾಯ ರೋಹಿದಾಸ ಗಾಂವಕರ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಜಿ. ನಾಯಕ ಮತ್ತು ವಿದ್ಯಾರ್ಥಿಗಳು ನಿರ್ವಹಿಸಿದರು.
ಬಾಲಕರ ವಾಲಿಬಾಲ್ ಪಂದ್ಯಗಳಲ್ಲಿ ಕುಮಟಾ ತಾಲೂಕು ಬಾಡ ಜನತಾ ವಿದ್ಯಾಲಯ ಪ್ರಥಮ ಮತ್ತು ಹೊನ್ನಾವರ ತಾಲೂಕು ಕಡತೋಕಾ ಜನತಾ ವಿದ್ಯಾಲಯ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಹೊನ್ನಾವರ ತಾಲೂಕು ಗುಂಡಬಾಳದ ಆರೋಗ್ಯ ಮಾತಾ ಹೈಸ್ಕೂಲ್ ಪ್ರಥಮ ಮತ್ತು ಕಾರವಾರ ತಾಲೂಕು ಮಾಜಾಳಿಯ ಯೂನಿಯನ್ ಹೈಸ್ಕೂಲ್ ದ್ವಿತೀಯ ಸ್ಥಾನ ಪಡೆಯಿತು.
ವಿಭಾಗಮಟ್ಟದ ಕ್ರೀಡಾಕೂಟ 16ರಿಂದ 9 ಜಿಲ್ಲೆಗಳನ್ನು ಒಳಗೊಂಡ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟ ಸೆ. 16ರಿಂದ ಭಟ್ಕಳ ತಾಲೂಕಿನ ಶಿರಾಲಿಯ ತಟ್ಟಿಹಕ್ಕಲ ಮೈದಾನದಲ್ಲಿ ಆರಂಭವಾಗಲಿವೆ ಎಂದು ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.