

ರಾಮನಗರ : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದಾ ಕೆಲಸದ ಒತ್ತಡದಲ್ಲಿರುತ್ತಾರೆ. ಅವರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಆರೋಗ್ಯದಿಂದಿರಬಹುದು ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸಲಹೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ 2024-25ನೇ ಸಾಲಿನ ಸರ್ಕಾರಿ ನೌಕರರ ಸಂಘದ ರಾಮನಗರ ತಾಲೂಕು ಹಂತದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವಂತರಾಗಿರಲು ದೈಹಿಕ ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯ, ಈ ದಿಸೆಯಲ್ಲಿ ಸಾರ್ವಜನಿಕ ಸೇವೆ ಮಾಡುವ ನೌಕರರಿಗೆ, ಒತ್ತಡಗಳಿರುತ್ತವೆ, ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ ಆದಕಾರಣ ನಿತ್ಯ ನಿಮ್ಮ ಕೆಲಸದ ಜತೆಗೆ ಯೋಗ, ವ್ಯಾಯಾಮ, ನಡಿಗೆ, ಧ್ಯಾನ, ದೈಹಿಕ ಮತ್ತು ಮನರಂಜನಾ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಎಂದರು.
ಹಿರಿಯರು, ಯುವಕರನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಿ, ಅಗತ್ಯ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಇದರ ಪರಿಮಿತಿಯಲ್ಲಿಯೇ ಸರ್ಕಾರದಿಂದ ಮಂಜೂರಾಗಿರುವ 5 ಕೋಟಿ ರೂಪಾಯಿ ಅನುದಾನದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಮಾತನಾಡಿದರು.
ಚೆಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮದನ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಸರ್ಕಾರಿ ನೌಕರರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ನಗರಸಭೆ ಸದಸ್ಯ ಬೈರೇಗೌಡ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ. ಸರ್ಕಾರಿ ನೌಕರರ ಸಂಘದ ಕಾಂತರಾಜು, ಶಿವಸ್ವಾಮಿ, ಎಂ.ರಾಜೇಗೌಡ, ಬೈರಪ್ಪ, ಪಾದ್ರಳ್ಳಿ ಸತೀಶ್ , ಪ್ರದೀಪ್ ಮುಂತಾದವರು ಇದ್ದರು.