

ನಾಗಮಂಗಲ: ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳೂ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಆದ್ದರಿಂದ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮತ್ತು ಎನ್‌ಎಸ್‌ಎಸ್ ಮೇಲೆ ಆಸಕ್ತಿ ವಹಿಸಿದಾಗ ಮಾತ್ರ ವಿದ್ಯಾರ್ಥಿಗಳ ಬದುಕಿಗೆ ನಿಜವಾದ ಸಾರ್ಥಕತೆ ಇರುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಹೊರವಲಯ ದೇವಲಾಪುರ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್ ಯೋಜನೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಕಗಳಿಸಿ ತೇರ್ಗಡೆಯಾಗುವುದಕ್ಕೆ ವಿದ್ಯಾರ್ಥಿಗಳು ಸೀಮಿತವಾಗಬಾರದು. ವಿದ್ಯೆ ಕಲಿತವರಿಗೆಲ್ಲ ಕೆಲಸ ಸಿಗುವುದಿಲ್ಲ. ಉದ್ಯೋಗದಿಂದಲೇ ಜೀವನ ಕಟ್ಟಿಕೊಳ್ಳುತ್ತೇವೆ ಎನ್ನುವುದನ್ನು ಬಿಡಬೇಕು. ವೈಯಕ್ತಿಕವಾಗಿ ಜೀವನ ಕಟ್ಟಿಕೊಳ್ಳಲು ಅನೇಕ ದಾರಿಗಳಿವೆ. ವಿದ್ಯೆಯ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ವಿವೇಕ ಬೆಳೆಸಿಕೊಂಡು, ಬುದ್ಧಿವಂತರಾಗಿ ದೇಶದ ವಿಚಾರಗಳನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಏನೆಲ್ಲ ಆಗುತ್ತಿದೆ. ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರಿತು ತಾವು ಕಲಿತ ಶಿಕ್ಷಣ ಸಂಸ್ಥೆ ಮತ್ತು ಪಾಲಕರಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದಿರುವ ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳು ಹೊರ ದೇಶಕ್ಕೆ ಹೋಗಿ ಅಲ್ಲಿನ ಜನರಿಗೆ ತಿಳಿವಳಿಕೆ ಕೊಡುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ. ಹಾಗಾಗಿ ನಿಮ್ಮ ಬುದ್ಧಿವಂತಿಕೆ ನಮ್ಮ ದೇಶಕ್ಕೆ ಹಾಗೂ ನಿಮ್ಮ ಪಾಲಕರಿಗೆ ಉಪಯೋಗವಾಗುವಂತಿರಬೇಕು. ಕಳೆದ 2006ರಲ್ಲಿ ನಾನು ಸಚಿವನಾಗಿದ್ದ ಅವಧಿಯಲ್ಲಿ ತಾಲೂಕಿನಲ್ಲಿ ಸರ್ಕಾರಿ ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಕಾಲೇಜು, ಐಟಿಐ ಕಾಲೇಜು ತೆರೆಯಲಾಯಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ವಿದ್ಯೆ ಕಲಿಸಿದ ಶಿಕ್ಷಣ ಸಂಸ್ಥೆಯನ್ನು ಸ್ಮರಿಸಿಕೊಂಡು ಕುಟುಂಬದಲ್ಲಿ ತಂದೆ, ತಾಯಂದಿರನ್ನು ಚೆನ್ನಾಗಿ ನೋಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದರು.
ಬೆಂಗಳೂರಿನ ಆರ್‌ಎನ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಡಿ.ಸಿ.ಚಿತ್ರಲಿಂಗಯ್ಯ, ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಡಿವೈಎಸ್‌ಪಿ ಚಲುವರಾಜು, ಕಾಲೇಜಿನ ಪ್ರಾಂಶುಪಾಲೆ ವೈ.ಸಿ.ನೇತ್ರಾವತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಪುರಸಭೆ ನಾಮನಿರ್ದೇಶಿತ ಸದಸ್ಯ ಸಂಪತ್‌ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಇದ್ದರು.