

ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಿಗೆ ಗುರುವಾರ ಭೀಮನ ಅಮಾವಾಸ್ಯೆ ಪ್ರಯುಕ್ತ ದಂಪತಿ ಸೇರಿದಂತೆ ಭಕ್ತರ ದಂಡೇ ಹರಿದು ಬಂತು.
ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮ, ಆರ್.ಎಸ್ ದೊಡ್ಡಿಯ ಮಹದೇಶ್ವರಸ್ವಾಮಿ, ದಿಂಬಾದಳೇಶ್ವರ, ಮಂಗಲದ ಕೋಣನ ಮಾರಮ್ಮ, ವೈಶಂಪಾಳ್ಯದ ಶಿವಲಂಕಾರೇಶ್ವರ, ಲೊಕ್ಕನಹಳ್ಳಿಯ ಸಂಪಿಗೇಶ್ವರ, ಬಂಡಳ್ಳಿಯ ಈಶ್ವರ ದೇಗುಲ, ಕೌದಳ್ಳಿ, ವಡಕೆಹಳ್ಳದ ಮಹದೇಶ್ವರ ಸ್ವಾಮಿ ದೇಗುಲ ಸೇರಿದಂತೆ ತಾಲೂಕಿನ ಇನ್ನಿತರ ದೇಗುಲಗಳಲ್ಲಿ ಅಮಾವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.
ಸಾಮಾನ್ಯವಾಗಿ ಎಲ್ಲ ದೇಗುಲಗಳಲ್ಲಿ ತಳೀರು, ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗಾರ ಮಾಡಲಾಗಿತ್ತು. ಭೀಮನ ಅಮಾವಾಸ್ಯೆಯ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪತಿಯೊಂದಿಗೆ ಆಗಮಿಸಿದ್ದರು. ಇದರಿಂದ ದೇಗುಲಗಳು ಬೆಳಗ್ಗೆಯಿಂದ ಸಂಜೆಯ ತನಕ ಭಕ್ತಗಣದಿಂದ ತುಂಬಿ ತುಳುಕುತ್ತಿತ್ತು. ಕೆಲವು ದೇಗುಲಗಳಲ್ಲಿ ಪ್ರಸಾದ, ಅನ್ನ ಸಂತರ್ಪಣೆ ವಿನಿಯೋಗಿಸಲಾಯಿತು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು.
ಶ್ರೀ ಬೆಟ್ಟಳ್ಳಿ ಮಾರಮ್ಮ: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲವನ್ನು ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಬೆಳಗ್ಗೆ 5.30ರಲ್ಲಿ ದೇವಿಗೆ ಪನ್ನೀರು, ಎಳನೀರು, ಅರಿಸಿಣ, ಕುಂಕುಮ, ಜೇನುತುಪ್ಪ, ಹಾಲು, ಮೊಸರು ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ದೀಪ, ಧೂಪದಾರತಿ ನೆರವೇರಿಸಿ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪಟ್ಟಣ ಸೇರಿದಂತೆ ಮಂಗಲ, ಭೈರನತ್ತ, ಉದ್ದನೂರು, ಬೆಳತ್ತೂರು, ಅಜ್ಜೀಪುರ, ಮಾಲಾಪುರ, ಚಿಂಚಳ್ಳಿ, ಮಣಗಳ್ಳಿ, ಬಂಡಳ್ಳಿ, ಆರ್.ಎಸ್ ದೊಡ್ಡಿ ಹಾಗೂ ಇನ್ನಿತರ ಗ್ರಾಮಗಳಿಂದ ಆಗಮಿಸಿದ ಭಕ್ತರು ಸರತಿ ಸಾಲಿನಲ್ಲಿ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಹರಕೆ ಹೊತ್ತ ಭಕ್ತರು ದೇಗುಲ ಮುಂಭಾಗ ಉಪ್ಪು ಸುರಿದು ನಮಿಸಿದರು. ಕೆಲ ಭಕ್ತರು ಬೂದು ಕುಂಬಳಕಾಯಿ ಹಾಗೂ ನಿಂಬೆಹಣ್ಣಿನ ಆರತಿ ಸೇವೆ ನೆರವೇರಿಸಿದರು.
ದಿಂಬಾದಳೇಶ್ವರ ದೇಗುಲದಲ್ಲಿ ಪೂಜೆ: ಆರ್.ಎಸ್ ದೊಡ್ಡಿ ಬಳಿಯ ದಿಂಬಾದಳೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ 12ರ ವೇಳೆಯಲ್ಲಿ ಸ್ವಾಮಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ದಾನಿಗಳಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಆಗಮಿಸಿದ ಭಕ್ತರು ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.