ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ

07-03-HNPP 1
Published on

ಹೊಳೆನರಸೀಪುರ: ಪಟ್ಟಣದ ವಿವಿಧೆಡೆಗಳಲ್ಲಿನ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶುಕ್ರವಾರ ಬೆಳಗ್ಗಿನಿಂದಲೆ ವಿಶೇಷ ಪೂಜೆಗಳು ಆರಂಭವಾಗಲಿವೆ.


ಪಟ್ಟಣದ ಶ್ರೀಲಕ್ಷ್ಮಣೇಶ್ವರ ದೇವಾಲಯ, ಕೋಟೆ ನೀಲಕಂಠೇಶ್ವರ, ಓಂಕಾರೇಶ್ವರ ದೇವಾಲಯ, ಪೇಟೆ ಶ್ರೀಕನ್ಯಕಾಪರಮೇಶ್ವರಿ ದೇವಾಲಯಗಳಲ್ಲಿ ನಾಲ್ಕು ಯಾಮಗಳಲ್ಲಿ ಪಂಚಾಮೃತಾಭಿಷೇಕ, ರುದ್ರಾಭಿಷೇಕಗಳು ನಡೆಸಲು ಪೂರ್ವ ಸಿದ್ಧತೆಗಳು ಆರಂಭಗೊಂಡಿವೆ


ಶ್ರೀಲಕ್ಷ್ಮಣೇಶ್ವರ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಕವಾಟೋದ್ಘಾಟನೆ, ಶ್ರೀಸ್ವಾಮಿಗೆ 108 ಲೀಟರ್ ಹಾಲಿನ ಅಭಿಷೇಕ, 11 ಗಂಟೆಗೆ ಮಹಾಮಂಗಳಾರತಿ, ತೀಥಪ್ರಸಾದ ವಿನಿಯೋಗ, ಮಧ್ಯಾಹ್ನ 2ಗಂಟೆಗೆ ಸ್ವಾಮಿ ದರ್ಶನ, ಕವಾಟ ಬಂಧನ, ನಾಲ್ಕು ಗಂಟೆಯಿಂದ ದೇವರ ದರ್ಶನ ಹಾಗೂ 6 ಗಂಟೆಯಿಂದ ನಾಲ್ಕು ಯಾಮದ ಪೂಜೆಗಳು ಶವಿವಾರ ಬೆಳಗಿನ ಮೂರು ಗಂಟೆಯವರೆಗೆ ನಡೆಯಲಿವೆ.


ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತಿ ಮಠ ಶಾಖಾಮಠ, ಚತುರ್ಭುಜ ಪಟ್ಟಾಭಿ ರಾಮಮಂದಿರದ ನೀಲಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆಗಳು ಮತ್ತು ಶನಿವಾರ ಬೆಳಗ್ಗೆ ಪರಮಪೂಜ್ಯ ಉಭಯ ಶ್ರೀಶಂಕರಭಾರತಿ ಸ್ವಾಮೀಜಿ ಹಾಗೂ ಶ್ರೀಬ್ರಹ್ಮಾನಂದಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀನೀಲಕಂಠೇಶ್ವರ ರಥೋತ್ಸವ ನಡೆಯಲಿದೆ.


ಶ್ರೀಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ಕ್ಲಬ್ ವತಿಯಿಂದ 12 ವರ್ಷ ಮೇಲ್ಪಟ್ಟವರು ಶಿವ ಗಾಯನ ಸಂಭ್ರಮ ಹಾಗೂ ಶಿವನ ಹಾಡುಗಳ ಭಜನೆ, ಶಿವನ ಮೇಲಿನ ಚಿತ್ರಗೀತೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೆ ಶಿವನ ಬಗೆಗೆ ಅಂತ್ಯಾಕ್ಷರಿಯನ್ನೂ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಿವನ ಬಗ್ಗೆ ರಸಪ್ರಶ್ನೆಗಳಿಗೆ ಉತ್ತರಿಸುವ ವಿಜೇತರಿಗೆ ಸ್ಥಳದಲ್ಲೇ ಬಹುಮಾನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಸಂಜೆ ಆರು ಗಂಟೆಗೆ ವರ್ಷಿಣಿ ಹಾಗೂ ಮೃತಿಕಾ ಅವರು ಶಿವತಾಂಡವ ನೃತ್ಯ ನಡೆಸಿಕೊಡಲಿದ್ದಾರೆ ಎಂದು ಕ್ಲಬ್ ಕಾರ್ಯದರ್ಶಿ ಹೇಮಾನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net