ಅಯೋಧ್ಯೆಯತ್ತ ಹೊರಟ ವಿಶೇಷ ರೈಲು

Train_Ayodhya
Published on

ತುಮಕೂರು: ಅಯೋಧ್ಯೆಯ ಬಾಲರಾಮನ ದರುಶನಕ್ಕೆ ತುಮಕೂರಿನಿಂದ ವಿಶೇಷ ರೈಲು ಮೂಲಕ 180ಕ್ಕು ಹೆಚ್ಚು ಭಕ್ತರು ಪಯಣ ಬೆಳಸಿದರು. ಈ ವಿಶೇಷ ರೈಲು ಎರಡೂವರೆ ದಿನಗಳಲ್ಲಿ ಅಯೋಧ್ಯೆ ತಲುಪಲಿದೆ.

ಬುಧವಾರ ಮುಂಜಾನೆ 5.45ಕ್ಕೆ ನಗರದಿಂದ ಹೊರಟ ತುಮಕೂರು-ಅಯೋಧ್ಯೆ ಧಾಮ ಆಸ್ತಾ ವಿಶೇಷ ರೈಲಿಗೆ ರೈಲ್ವೆ ಇಲಾಖೆಯ ಡಿಆರ್‌ಎಂ ಯೋಗೀಶ್ ಮೋಹನ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಹಸಿರು ನಿಶಾನೆ ತೋರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯೋಗೀಶ್ ಮೋಹನ್, ತುಮಕೂರಿನಿಂದ ಅಯೋಧ್ಯೆಗೆ ವಿಶೇಷ ರೈಲು ಸಂಚಾರ ಆರಂಭವಾಗಿದೆ. ತುಮಕೂರಿನಿಂದ ಈ ವಿಶೇಷ ರೈಲಿನಲ್ಲಿ ಅಯೋಧ್ಯೆಗೆ 180ಕ್ಕು ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, ಅರಸೀಕೆರೆಯಿಂದ ಇನ್ನು ಹೆಚ್ಚಿನ ಪ್ರಯಾಣಿಕರು ಕೂಡಿಕೊಳ್ಳಲಿದ್ದಾರೆ ಎಂದರು.

ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆಹಾರದೊಂದಿಗೆ ಸ್ಲೀಪರ್ ಕೋಚ್‌ಗಳ ವ್ಯವಸ್ಥೆ ಇರಲಿದೆ. ಈ ರೈಲಿಗೆ ಸದಾ ಆರ್‌ಪಿಎಫ್ ಬೆಂಗಾವಲು ಸಹ ಇರಲಿದೆ. ಪ್ರತಿ 4 ದಿನಗಳಿಗೊಮ್ಮೆ ರಾಜ್ಯದ ಬೇರೆ ಬೇರೆ ನಿಲ್ದಾಣಗಳಿಂದ ಅಯೋಧ್ಯೆಗೆ ರೈಲು ತೆರಳಲಿದೆ ಎಂದು ತಿಳಿಸಿದರು.

6ದಿನಗಳ ಪ್ರವಾಸ: ಜಿಲ್ಲೆಯ ಭಕ್ತರು ಸಂಭ್ರಮ, ಸಡಗರದಿಂದ ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ 6 ದಿನಗಳ ಪ್ರವಾಸ ಹೊರಟಿದ್ದಾರೆ. ತಲಾ 3 ಸಾವಿರ ರೂ., ಪಾವತಿಸಿ ರೈಲು ಪ್ರಯಾಣ ಮಾಡುತ್ತಿರುವ ಯಾತ್ರಿಕರಿಗೆ ರೈಲ್ವೆ ಇಲಾಖೆ ಎಲ್ಲಾ ರೀತಿಯ ಸೇವಾಸೌಲಭ್ಯ ಒದಗಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೇಳಿದರು.

ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳಾದ ಎಡಿಆರ್‌ಎಂ ಕುಸುಮ ಹರಿಪ್ರಸಾದ್, ಕೃಷ್ಣ ಚೈತನ್ಯ, ಡಾ.ಭಾರ್ಗವಿ, ಅಯೋಧ್ಯೆ ಯಾತ್ರೆಯ ಸಂಚಾಲಕ ಜಗದೀಶ್ ಹಿರೇಮನೆ, ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಡಾ.ಎಸ್.ಪರಮೇಶ್, ಮಾಧಮ ಸಂಚಾಲಕ ಟಿ.ಆರ್.ಸದಾಶಿವಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್.ಮಲ್ಲಿಕಾರ್ಜುನಯ್ಯ, ಸಿ.ಎನ್.ರಮೇಶ್, ಮುಖಂಡರಾದ ಕೆ.ವೇದಮೂರ್ತಿ, ಚಂದ್ರಬಾಬು ಮತ್ತಿತರರು ಅಯೋಧ್ಯೆ ಯಾತ್ರಿಕರಿಗೆ ಈ ಸಂದರ್ಭದಲ್ಲಿ ಶುಭ ಕೋರಿದರು.

ರಾಜ್ಯದಿಂದ ಮೊದಲ ತಂಡವಾಗಿ ಜಿಲ್ಲೆಯ ಭಕ್ತರು ಅಯೋಧ್ಯೆಗೆ ಹೊರಟಿದ್ದಾರೆ. ಅವರಿಗೆ ರೈಲ್ವೆ ಇಲಾಖೆ ಅಗತ್ಯ ಸೌಕರ್ಯ, ರಕ್ಷಣೆ ಒದಗಿಸಿದೆ. ದೇಶದ ಜನರ ಆಶಯದಂತೆ ಜನವರಿ 22 ರಂದು ಪ್ರಧಾನಿ ಮೋದಿ ಅವರ ಯಜಮಾನಿಕೆಯಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ಧರ್ಮಕ್ಷೇತ್ರವಾಗಿ ಅಯೋಧ್ಯೆ ಭಕ್ತರನ್ನು ಆಕರ್ಷಿಸಿದೆ. ಬಿ.ಸುರೇಶಗೌಡ ಗ್ರಾಮಾಂತರ ಶಾಸಕ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಐದು ಶತಮಾನಗಳ ಹೋರಾಟದ ಹಿಂದೆ ಹಲವಾರು ಕರಸೇವಕರು, ಭಕ್ತರ ತ್ಯಾಗ, ಬಲಿದಾನವಿದೆ. ಭಾರತೀಯರ ಧರ್ಮ ತಳಹದಿಯಾಗಿರುವ ಭಕ್ತಿಯ ಆರಾಧನಾ ಕೇಂದ್ರವಾಗಿ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣವಾಗಿದೆ. ಅಯೋಧ್ಯೆ ಶ್ರೀ ರಾಮನ ದರ್ಶನಕ್ಕೆ ಹೋಗುವ ಭಕ್ತರಿಗಾಗಿ ತುಮಕೂರಿನಿಂದ ವಿಶೇಷ ರೈಲು ಸೇವೆ ಒದಗಿಸಿ ರೈಲ್ವೆ ಇಲಾಖೆ ಅನುಕೂಲ ಮಾಡಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆ ಪ್ರವಾಸಕ್ಕೆ ತೆರಳುತ್ತಿರುವುದು ವಿಶೇಷ. ಮುಂದಿನ ದಿನಗಳಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿ ಅಯೋಧ್ಯೆ ಜಗತ್ತಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯಲಿದೆ. ಅಂಬಿಕಾ ಹುಲಿನಾಯ್ಕರ್ ರಾಜ್ಯ ಬಿಜೆಪಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net