

ಮದ್ದೂರು: ವಿಜಯದಶಮಿ ಅಂಗವಾಗಿ ತಾಲೂಕು ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ತಾಲೂಕಿನ ಹೆಮ್ಮನಹಳ್ಳಿ ಚೌಡೇಶ್ವರಿ, ನಗರಕೆರೆ ಪಟ್ಟಲದಾಂಭ, ಮಲ್ಲನಕುಪ್ಪೆ ದಂಡಿನಮಾರಮ್ಮ, ದೇಶಹಳ್ಳಿ ಆದಿಶಕ್ತಿ, ವೈದ್ಯನಾಥಪುರ ಪ್ರಸನ್ನ ಪಾರ್ವತಮ್ಮ ಹಾಗೂ ಪಟ್ಟಣ ವ್ಯಾಪ್ತಿಯ ಶಕ್ತಿದೇವತೆ ಮದ್ದೂರಮ್ಮ, ರೇಣುಕಾಎಲ್ಲಮ್ಮತಾಯಿ, ಹಳೇ ಬಸ್ ನಿಲ್ದಾಣದ ಕಾಶಿ ವಿಶ್ವೇಶ್ವರ ವಿಶಾಲಾಕ್ಷಿ ಮತ್ತು ದಂಡಿನ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನೆರವೇರಿದವು.
ಶನಿವಾರ ಬೆಳಿಗ್ಗೆಯಿಂದಲೇ ದೇವಾಲಯದ ಆವರಣದಲ್ಲಿ ಹೋಮ, ಹವನ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ಇನ್ನಿತರ ಪೂಜಾ ಕೈಂಕರ್ಯಗಳು ನೆರವೇರಿದವಲ್ಲದೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ವಿಜಯದಶಮಿ ಅಂಗವಾಗಿ ದೇವಾಲಯಗಳಲ್ಲಿ ಮೂಲ ವಿಗ್ರಹ ಮೂರ್ತಿಗೆ ವಿವಿಧ ಪುಷ್ಪಗಳಿಂದ ಅಲಂಕಾರ ಕೈಗೊಳ್ಳಲಾಗಿತ್ತದಲ್ಲದೆ ಭಕ್ತರು ಹರಕೆ ಸಲ್ಲಿಸಿದರು.