

ಹಿರೀಸಾವೆ: ಹೋಬಳಿಯ ಚಿಕ್ಕೋನಹಳ್ಳಿ ಗೇಟ್ ಬಳಿಯಿರುವ ಸದ್ಗುರು ಶ್ರೀ ಸಾಯಿ ಸಿದ್ದಾಶ್ರಮದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಭಾನುವಾರ ವಿವಿಧ ಹೋಮ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಯಿತು.
ಬೆಳಗ್ಗೆ 7.30 ರಲ್ಲಿ ಗಂಗಾಪೂಜೆ ಜರುಗಿದ್ದು, ಗಣಹೋಮ, ವ್ಯಾಸ ಪೂಜೆ, ಸದ್ಗುರು ಪೂಜೆ, ಭಿಕ್ಷಾವಂದನೆ ಹಾಗೂ ಕುಂಭಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿದಿ ವಿಧಾನಗಳನ್ನು ಕೈಗೊಳ್ಳಲಾಯಿತು.
10.30 ರಲ್ಲಿ ಸಾಯಿಬಾಬಾ ಮೂರ್ತಿಗೆ ವಸ್ತ್ರ ಹಾಗೂ ಕಿರೀಟ ಧರಿಸಿ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಯಿತು. ಪುಷ್ಪಾರ್ಚನೆ, ಪಾದಪೂಜೆ ನೆರವೇರಿಸಿದ ಅರ್ಚಕರು ಮುತ್ತಿನಾರತಿ ಬೆಳಗಿಸಿದರು.
ಭಕ್ತರು ದವಸ, ಧಾನ್ಯ ಹಾಗೂ ವಿವಿಧ ಬಗೆಯ ಹರಕೆ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರತಿ, ಸಾಯಿ ಭಜನೆ ಹಾಗೂ ಪೂರ್ಣಾವತಿ ಹೋಮದ ಬಳಿಕ ಅನ್ನದಾಸೋಹ ನಡೆಯಿತು. ಬೆಂಗಳೂರು, ಮೈಸೂರು, ಹಾಸನ, ತುಮಕೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.