ದೊಡ್ಡಮ್ಮತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ

ದೊಡ್ಡಮ್ಮತಾಯಿ ಸನ್ನಿಧಿಯಲ್ಲಿ ವಿಶೇಷ ಪೂಜೆ
Published on

ಕೊಳ್ಳೇಗಾಲ: ಚಿಕ್ಕಲ್ಲೂರು ಜಾತ್ರೆಯ 2ನೇ ದಿನದ ಹುಲಿವಾಹನ ಉತ್ಸವ ಸೇವೆ ಮಂಗಳವಾರ ಮುಟ್ಟನಹಳ್ಳಿಯ ದೊಡ್ಡಮ್ಮತಾಯಿ (ದೊಡ್ಡವರ ಸೇವೆ) ಸನ್ನಧಿಯಲ್ಲಿ ಶ್ರದ್ಧಾ-ಭಕ್ತಿಯಿಂದ ಜರುಗಿತು.

ಹಲಗೂರಿನ ಪಾಂಚಾಳರ ಬಳಿ ಶ್ರೀ ಸಿದ್ದಪ್ಪಾಜಿ ಕಬ್ಬಿಣದ ಭಿಕ್ಷೆ ಪಡೆಯಲು ತೆರಳುವ ಸಂದರ್ಭ ದೊಡ್ಡಮ್ಮ ತಾಯಿ ಸಿದ್ದಪ್ಪಾಜಿಗೆ ಆತ್ಮಸ್ಥೈರ್ಯ ತುಂಬಿ, ಆಶೀರ್ವದಿಸಿ ಬೆನ್ನೆಲುಬಾಗಿ ನಿಂತರು. ಸಿದ್ದಪ್ಪಾಜಿಗೆ ಪಾಂಚಾಳರು ನೀಡಿದ ಪವಾಡಗಳನ್ನು ಗೆಲ್ಲುವ ಶಕ್ತಿಯನ್ನು ದೊಡ್ಡಮ್ಮ ನೀಡಿದರು ಎಂಬುದು ಪುರಾಣವಾಗಿದೆ. ಈ ಹಿನ್ನೆಲೆ, ಚಿಕ್ಕಲ್ಲೂರಿನ ಜಾತ್ರೆಯ 2 ದಿನದ ಪೂಜೆ ದೊಡ್ಡಮ್ಮ ತಾಯಿಗೆ ಸಲ್ಲುತ್ತದೆ.

ಜಾತ್ರೆಗೆ ಬಂದ ಸಹಸ್ರಾರು ಪರುಶೆ ಬಿಡಾರಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಒಲೆ ಹಚ್ಚಿ ತಾಯಿ ದೊಡ್ಡಮ್ಮನ ಹೆಸರೇಳಿ ಕಜ್ಜಾಯ, ತುಪ್ಪ, ಪಾಯಸ, ಅನ್ನ, ಸಾಂಬರು ಅಡುಗೆ ತಯಾರಿಸಿಕೊಂಡು ಎಡೆ ಇಟ್ಟು ದೊಡ್ಡಮ್ಮ ತಾಯಿಗೆ ಅರ್ಪಣೆ ಮಾಡುತ್ತಾರೆ. ಶ್ರೀ ಸಿದ್ದಪ್ಪಾಜಿ ಗುರುಗಳಾದ ಶ್ರೀ ಮಂಟೇಸ್ವಾಮಿ ಆಜ್ಞೆಯಂತೆ ಹಲಗೂರಿಗೆ ಹೊರಡುವಾಗ ಸಿದ್ದಪ್ಪಾಜಿಗೆ ಧೈರ್ಯ ತುಂಬಿದ್ದಕ್ಕಾಗಿ ದೊಡ್ಡಮ್ಮತಾಯಿಗೆ ಶ್ರೀ ಸಿದ್ದಪ್ಪಾಜಿ ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಾರೆ.

ವಿಜೃಂಭಿಸಿದ ಹುಲಿ ವಾಹನ ಉತ್ಸವ: 2ನೇ ದಿನದ ಜಾತ್ರೆಯಲ್ಲಿ ಹುಲಿವಾಹನ ಉತ್ಸವ ವಿಜೃಂಭಣೆಯಿಂದ ನೆರವೇರಿತು. 5 ದಿನ ಜಾತ್ರೆಯಲ್ಲಿ ಸೋಮವಾರ ಕೃಷಿ ಸಮದ್ಧಿಯ ಆಚರಣೆಯಾದ ಚಂದ್ರಮಂಡಲ ಉತ್ಸವ ನಡೆಯಿತು. ಮಾರನೆ ದಿನ ಮಂಗಳವಾರ ರಾತ್ರಿ 9 ಗಂಟೆ ಬಳಿಕ ಹುಲಿವಾಹನ ಉತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಶ್ರೀ ಸಿದ್ದಪ್ಪಾಜಿ ಗದ್ದುಗೆ ದರ್ಶನ ಪಡೆದು ಪೂಜಾ ಕೈಂಕರ್ಯಗಳನ್ನು ನಡೆಸಿದರು. ತಿ.ನರಸೀಪುರ ಮೂಲದ ಎಸ್.ಮೇಗಡಹಳ್ಳಿ ಗ್ರಾಮಸ್ಥರು ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಹುಲಿವಾಹನದ ಉತ್ಸವದ ಪಲ್ಲಕ್ಕಿಯನ್ನು ವಿವಿಧ ಹೂಗಳಿಂದ ಅಲಂಕೃತಗೊಳಿಸಿ ಸಿದ್ಧಪಡಿಸುತ್ತಾರೆ. ಅದರಂತೆ, ಈ ಬಾರಿಯು ಪದ್ಧತಿಯಂತೆ ಪಲ್ಲಕ್ಕಿಯನ್ನು ಸಿದ್ಧಗೊಳಿಸಿದರು. ರಾಜ ಬೊಪ್ಪೇಗೌಡನಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ರಾಜೇಅರಸ್ ಅವರು ಸಿದ್ದಪ್ಪಾಜಿ ಗದ್ದುಗೆಗೆ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಬೆಳ್ಳಿಯ ಲಿಂಗ ಸಮೇತ ನಾಗಾಭರಣವನ್ನು ಹುಲಿವಾಹನ ಉತ್ಸವಕ್ಕೆ ಪ್ರತಿಷ್ಠಾಪನೆ ಮಾಡಲಾಯಿತು. ಆನಂತರ, ಸ್ವಾಮೀಜಿ ಅವರು ಹುಲಿ ವಾಹನ ಉತ್ಸವಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿ ದೇವಾಲಯ ಪ್ರದಕ್ಷಿಣೆ ಹಾಕಿದರು. ನೀಲಗಾರರ ಜಾಗಟೆ, ಡೊಳ್ಳು, ತಮಟೆ, ಕಂಸಾಳೆ ಸದ್ದಿನಲ್ಲಿ ಕುರುಬನಕಟ್ಟೆಯ ಚೆನ್ನಯ್ಯ-ಲಿಂಗಯ್ಯ ಕಂಡಾಯಗಳು, ಸತ್ತಿಗೆ, ಸೂರಾಪಾನಿ, ಛತ್ರಿ, ಚಾಮರ ಉತ್ಸವಕ್ಕೆ ಮೆರುಗು ನೀಡಿತು.

ಧೂಪ-ಹವನ: ಚಿಕ್ಕಲ್ಲೂರು ಜಾತ್ರೆಗೆ ಭಕ್ತ ಸಾಗರ ಹರಿದು ಬರುತ್ತಿದೆ. ಅಂತೆಯೇ, 2 ದಿನದ ಜಾತ್ರೆಯಲ್ಲೂ ಸಾವಿರಾರು ಭಕ್ತರು ದೇವಾಲಯ ಮುಂದಿರುವ ಧೂಪದ ಗುಳಿಯಲ್ಲಿ ಕರ್ಪೂರ, ಗಂಧದ ಕಡ್ಡಿ, ಧೂಪ ಹಚ್ಚಿ ಭಕ್ತಿ ಮರೆದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net