ವಿಶೇಷ ಪೂಜೋತ್ಸವ ಸಂಪನ್ನ

07SPT2
Published on

ಸೋಮವಾರಪೇಟೆ: ಯಡವನಾಡು ಶಿವ ಬಸವೇಶ್ವರ ದೇವಾಲಯದ ಹನ್ನೆರಡನೇ ವರ್ಷದ ವಿಶೇಷ ಪೂಜೋತ್ಸವ ಸೋಮವಾರ ಮುಕ್ತಾಯವಾಯಿತು.

ಬೆಳಗ್ಗೆ 6.30 ರಿಂದ ಗ್ರಾಮದ ಮುಖ್ಯ ರಸ್ತೆಯಿಂದ ದೇವಾಲಯದವರೆಗೂ ಗ್ರಾಮದ ಮಹಿಳೆಯರು ಹಾಗೂ ಮಕ್ಕಳು ಪೂರ್ಣಕುಂಭ ಕಲಶಗಳನ್ನು ಹೊತ್ತು ಮೆರವಣಿಗೆ ಮೂಲಕ ದೇವಾಲಯದ ಅವರಣಕ್ಕೆ ತಂದರು.

ಗ್ರಾಮದ ಪ್ರತಿ ಮನೆ ಮನೆಗಳ ಮುಂದೆ ರಂಗೋಲಿ ಬಿಡಿಸಿ ಪೂರ್ಣಕುಂಭ ಕಲಶಗಳನ್ನು ಸ್ವಾಗತಿಸಿ ಪೂಜಿಸಿದರು. 8 ಗಂಟೆಗೆ ದೇವರ ಸನ್ನಿಧಿಯಲ್ಲಿ ಕಲಶಗಳನ್ನು ಇಟ್ಟ ಬಳಿಕ ದೇವರ ಪೂಜಾ ವಿಧಿಗಳು ಆರಂಭವಾದವು. ದೇವರಿಗೆ ಮಹಾಕುಂಭಾಭಿಷೇಕ ನೆರವೇರಿಸಲಾಯಿತು.

ಅರ್ಚಕ ಜಗದೀಶ್ ಉಡುಪ ಹಾಗೂ ಸುಧೀಂದ್ರ ಭಟ್ ತಂಡದಿಂದ ಪೂಜೆ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆಯೂ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ, ಉಪಾಧ್ಯಕ್ಷ ಡಿ.ಪಿ. ಕುಟ್ಟಪ್ಪ, ಖಜಾಂಚಿ ಭಾನುಪ್ರಕಾಶ್, ನಿರ್ದೇಶಕರಾದ ಪಿ.ಬಿ. ಸಣ್ಣಯ್ಯ, ಎಂ.ಸಿ.ನವೀನ, ಪಿ.ಜಿ.ಜನಾರ್ಧನ, ಎಲ್.ಬಿ. ದಿನೇಶ್, ಬಿ.ಪಿ.ಭಾನು, ಎಚ್.ಸಿ.ಸುಭಾಶ್, ಟಿ.ಜೆ. ತಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net