

ಬೆಟ್ಟದಪುರ: ಬೆಟ್ಟದಪುರದ ಶ್ರೀ ಶಾಂತಿವೀರಮ್ಮ ದೇವಾಲಯದಲ್ಲಿ ಮಂಗಳವಾರ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಜರಗಿತು.
ಮುಂಜಾನೆ ದೇವಿಯನ್ನು ಶುಚಿಗೊಳಿಸಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ ಅಭಿಷೇಕಗಳು ಹಾಗೂ ಮಹಾ ಮಂಗಳಾರತಿ ನಡೆಯಿತು. ಇದೇ ವೇಳೆ ಗ್ರಾಮದ 108 ಮುತ್ತೈದೆಯರು ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ, ಕುಂಕುಮಾರ್ಚನೆ ಹಾಗೂ ಅಭಿಷೇಕ ಮತ್ತು ವಿವಿಧ ಬಗೆಯ ಪೂಜೆಗಳನ್ನು ನಡೆಸಿಕೊಟ್ಟರು.
ದೇವತೆ ಶಾಂತಿವೀರಮ್ಮ ದೇವಿಯ ಆರಾಧನೆ ಮಾಡುವುದರಿಂದ ಗ್ರಾಮದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲೆಂದು, ಗ್ರಾಮಕ್ಕೆ ಯಾವುದೇ ಕೆಡಕು ಉಂಟಾಗಬಾರದೆಂಬ ಉದ್ದೇಶದಿಂದ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಪೂಜಾ ಕೈಂಕರ್ಯಗಳನ್ನು ನಡೆಸುವುದು ಇಲ್ಲಿನ ವಾಡಿಕೆ ಇದೆ.
ಎಲ್ಲ ಪೂಜಾ ಕಾರ್ಯಕ್ರಮಗಳು ಅರ್ಚಕರಾದ ಪ್ರಭಾಶಂಕರ್, ಮಂಜು ನೇತೃತ್ವದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಶ್ರೀ ಶಾಂತಿವೀರಮ್ಮ ದೇವಿ ಸಮಿತಿಯ ಸದಸ್ಯರಾದ ಪಟೇಲ್, ನಟೇಶ್, ಸುರೇಶ್, ಲೋಕೇಶ್, ತಿಮ್ಮಪ್ಪಯ್ಯ, ದೇವರಾಜು, ಜಯರಾಮ್, ದೀಪು, ಮಹೇಶ್ ಸೇರಿದಂತೆ ಗ್ರಾಮದ ಮಹಿಳೆಯರು ಹಾಗೂ ಮುಖಂಡರು ಇದ್ದರು.