

ಬೆಂಗಳೂರು : ಹರ ಮುನಿದರು ಗುರು ಕಾಯ್ವ ಎಂಬ ಮಾತಿನಂತೆ ಭಾರತೀ ಸಂಸ್ಕೃತಿಯಲ್ಲಿ ಗುರುವಿಗೆ ಪ್ರಮುಖ ಸ್ಥಾನವಿದೆ. ಪ್ರತಿವರ್ಷ ಆಷಾಡ ಮಾಸದ ಪೌರ್ಣಿಮೆಯನ್ನು ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ನಗರದ ವಿವಿಧೆಡೆಗಳಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ 8 ಗಂಟೆಯಿಂದ ಶ್ರೀಶೈಲ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ 6 ಗಂಟೆಗೆ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ನಂತರ ಶ್ರೀಶೈಲ ಜಗದ್ಗುರುಗಳ ಪಾದಪೂಜೆ ನೆರವೇರಲಿದೆ. ಬಾದರಾಯಣ ಬ್ರಹ್ಮಸೂತ್ರಕ್ಕೆ ವೀರಶೈವ ಪರವಾದ ವ್ಯಾಖ್ಯಾನವನ್ನು ಬರೆದ ಪ್ರಾಚೀನ ಶ್ರೀಕರ ಭಾಷ್ಯ ಕೃತಿಯ ಕರ್ತೃ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯರ ಜಯಂತಿ ಮಹೋತ್ಸವ ನಡೆಯಲಿದೆ.
ಮಲ್ಲೇಶ್ವರದ 13ನೇ ಅಡ್ಡರಸ್ತೆಯಲ್ಲಿರುವ ಸಾಯಿಬಾಬ ಮಂದಿರ ಹಾಗೂ ತಿಂಡ್ಲುನಲ್ಲಿರುವ ವಿಶೇಷ 108 ಸಾಯಿಬಾಬ ಮಂದಿರದಲ್ಲಿ ಬಾಬಾ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಆರತಿ ಹಾಗೂ ಸಂಜೆ ದೇವರ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ಮಲ್ಲೇಶ್ವರದ ಶ್ರೀದತ್ತಾತ್ರೆಯ ದೇವಾಲಯ, ಹೊಸಕೆರೆಹಳ್ಳಿ ಶ್ರೀದತ್ತಾತ್ರೇಯ ದೇವಸ್ಥಾನದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಉತ್ತರಹಳ್ಳಿಯಲ್ಲಿರುವ ವರದಹಳ್ಳಿ ಶ್ರೀ ಶೀಧರಾಶ್ರಮದಲ್ಲಿ ಗುರು ಪಾದುಕಾ ಪೂಜೆ ಏರ್ಪಡಿಸಲಾಗಿದೆ. ಇನ್ನುಳಿದಂತೆ ನಗರದ ವಿವಿಧೆಡೆ ಇರುವ ಸಾಯಿಬಾಬ ಮಂದಿರ ಮತ್ತು ಗುರು ದತ್ತಾತ್ರೇಯರ ದೇವಾಲಯಗಳಲ್ಲಿ ದಿನಪೂರ್ತಿ ವಿಶೇಷ ಪೂಜೆ ಏರ್ಪಡಿಸಲಾಗಿದೆ.
ಜಕ್ಕೂರು 1ನೆ ಅಡ್ಡರಸ್ತೆಯಲ್ಲಿರುವ ಶೋಭಾ ವಿಂಡ್ ಪಾಲ್ ಅಪಾರ್ಟ್‌ಮೆಂಟ್ ಪಕ್ಕದ ದಿ. ಬಂಡಿಯಪ್ಪನವರು ಸ್ಥಾಪಿಸಿರುವ ಶ್ರೀವೀರಾಂಜನೇಯ ಸ್ವಾಮಿ ಟ್ರಸ್ಟ್ನ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರುಪೌರ್ಣಮಿ ಪ್ರಯುಕ್ತ ಬೆಳಗ್ಗೆ 5.45ಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ನಂತರ ಮಹಾಮಂಗಳಾರತಿ ನಡೆಯಲಿದೆ. ಮಂಗಳಾರತಿ ನಂತರ ಆಗಮಿಸಿದ ಭಕ್ತಾದಿಗಳಿ ತೀರ್ಥ ಪ್ರಸಾದ ವಿನಿಯೋಗವಾಗಲಿದೆ. ಇದೇ ವೇಳೆ ಮಂದಿರದಲ್ಲಿ ಶ್ರೀಗುರು ದತ್ತಾತ್ರೇಯ ಸ್ವಾಮಿ ಹೋಮ ಮತ್ತು ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಗುರುಪೂರ್ಣಿಮೆ ಅಂಗವಾಗಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಮಂದಿರದ ವ್ಯವಸ್ಥಾಪಕರಾದ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಶಂಕರಪುರಂನಲ್ಲಿರುವ ಶೃಂಗೇರಿ ಶಂಕರ ಮಠದಲ್ಲಿ ವಿಶೇಷ ಪೂಜೆ, ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಉತ್ತರ ಭಾರತದಲ್ಲಿ ಗುರುಪೂರ್ಣಿಮೆಯನ್ನು ವ್ಯಾಸ ಪೌರ್ಣಿಮೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಭಾರತಿ ಸಂಸ್ಕೃತಿಗೆ ಆಧಾರವಾಗಿರುವ ವೇದ, ಆಗಮಗಳ ಜ್ಞಾನಸಾರವನ್ನು ಜಗತ್ತಿಗೆ ನೀಡಿದ ವಾಸರನ್ನು ಗುರುಗಳ ಸ್ವರೂಪವಾಗಿ ಪೂಜಿಸಲಾಗುತ್ತದೆ. ಈ ನಿಟ್ಟಿನಲ್ಲಿ ಬೆಳಗ್ಗೆ 10ಕ್ಕೆ ವೇದವ್ಯಾಸ ಪೂಜೆ, 10.30ರಿಂದ ಗುರುಸಪರ್ಯಾ ಪಾರಾಯಣ ಮತ್ತು ಭಜನೆ ಹಾಗೂ ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ಹಮ್ಮಿಕೊಳ್ಳಲಾಗಿದೆ. ನಂತರ ಆಗಮಿಸಿದ ಎಲ್ಲ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಸಂಜೆ 5.30 ರಿಂದ 7 ಗಂಟೆಯವರೆಗೆ ವಿಶೇಷವಾಗಿ ಡಾ. ಕೆ.ಶೃತಿ ರಾವ್ ಇವರಿಂದ ‘ಗುರ್ವಂತರಂಗ ದರ್ಶನ’ ಎಂಬ ವಿಷಯ ಕುರಿತು ಪ್ರವಚನ ನಡೆಯಲಿದೆ.