ಶಿಷ್ಯನ ಸಂಶಯ ಶಾಸ್ತ್ರ ಸೃಷ್ಟಿಗೆ ಕಾರಣವಾಗಲಿದೆ; ಶ್ರೀಶೈಲ ಜಗದ್ಗುರುಗಳ ಪ್ರವಚನ, ನಾದಭಾಸ್ಕರ ಪ್ರಶಸ್ತಿ ಪ್ರದಾನ

NADA
Published on

ಬೆಂಗಳೂರು : ಸಂಶಯ ಎಂಬುದು ಮನುಷ್ಯನ ಮನಸ್ಸಿನ ಒಂದು ವೃತ್ತಿಯಾಗಿದ್ದು, ಶಿಷ್ಯನ ಮನಸ್ಸಿನಲ್ಲಿ ಮೂಡುವ ಸಂಶಯವು ಶಾಸ್ತ್ರ ಸೃಷ್ಟಿಗೆ ಕಾರಣವಾಗಲಿದ್ದು, ಸಂಶಯ ನಿವಾರಣೆಗೆ ಸಮರ್ಥ ಗುರುವಿನ ಅಗತ್ಯವಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದ್ದಾರೆ.

ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಏನೂ ತಿಳಿಯದ ಅಜ್ಞಾನಿಗೆ, ಎಲ್ಲವನ್ನು ತಿಳಿದಿರುವ ಜ್ಞಾನಿಗೆ ಸಂಶಯ ಮೂಡುವುದಿಲ್ಲ. ಆದರೆ ಏನನ್ನಾದರೂ ತಿಳಿದುಕೊಳ್ಳಬೇಕೆಂಬ ಮುಮುಕ್ಷುವಿನ ಮನಸ್ಸಿನಲ್ಲಿ ಸದಾ ಒಂದಿಲ್ಲೊಂದು ಸಂಶಯಗಳು ಮೂಡುತ್ತವೆ. ಅಂತಹ ಸಂಶಯದ ನಿವಾರಣೆಗಾಗಿ ಯೋಗ್ಯ ಗುರುವಿನ ಬಳಿ ಹೋಗಬೇಕು. ಸಂಶಯಗಳು ಸೇತುವೆಗಳಿದ್ದಂತೆ. ಅಸ್ಪಷ್ಟತೆಯ ದಡದಿಂದ ಸತ್ಯದ ದಡವನ್ನು ತಲುಪಿಸಲು ಸೇತುವೆ ನೆರವಾಗುತ್ತದೆ. ಇಂತಹ ಸಂಶಯ ಅಥವಾ ಜಿಜ್ಞಾಸೆಗಳೇ ಶಾಸ್ತ್ರ ಸೃಷ್ಟಿಗೆ ಕಾರಣ ಎಂದು ಜಗದ್ಗುರುಗಳು ವಿವರಿಸಿದರು.

ಸಮಾರಂಭದಲ್ಲಿ ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಪಂಡಿತ್ ರಾಜಗುರು ಡಾ.ಗುರುಸ್ವಾಮಿ ಕಲಕೇರಿಯವರಿಗೆ ನಾದಭಾಸ್ಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಂಚಾಚಾರ್ಯ ಪರಂಪರೆ, ವೀರಶೈವ ತತ್ವ ಪ್ರಸಾರದಲ್ಲಿ ಡಾ.ಗುರುಸ್ವಾಮಿ ಕಲಕೇರಿಯವರು ಸಾಹಿತಿಯಾಗಿ, ಸಂಗೀತಗಾರರಾಗಿ, ಪ್ರವಚನಕಾರರಾಗಿ ನಾಡಿನಾದ್ಯ ಮಾಡಿರುವ ಸೇವೆ ಅಪಾರವಾಗಿದ್ದು, ಈ ವರೆಗೆ 30 ಸಾವಿರಕ್ಕೂ ಹೆಚ್ಚಿನ ಸಂಗೀತ ಕಚೇರಿ ನಡೆಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಜಗದ್ಗುರುಗಳು ಪ್ರಶಂಸಿಸಿದರು.

ಸಮಾರಂಭದಲ್ಲಿ ಕರಿಭಂಟನಾಳ ಹಿರೇಮಠದ ಶ್ರೀಶಿವಕುಮಾರ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಗಂಗೆ ಮೇಲಣಗವಿ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ತೊಗರ್ಸಿ ಮಠದ ಶ್ರೀಮಹಾಂತ ದೇಶೀಕೇಂದ್ರ ಸ್ವಾಮೀಜಿ, ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಅಭಾವೀಮ ಬೆಂಗಳೂರು ಘಟಕದ ಅಧ್ಯಕ್ಷ ಗುರುಸ್ವಾಮಿ, ಕಾರ್ಯದರ್ಶಿ ಮೃತ್ಯುಂಜಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net