ಲೋಕಕಲ್ಯಾಣಾರ್ಥ ದೇಗುಲಗಳಲ್ಲಿ ಪೂಜೆ:2025ಕ್ಕೆ ಅದ್ದೂರಿ ಸ್ವಾಗತ:ದೇವಸ್ಥಾನಗಳು ಹೌಸ್‌ಫುಲ್

New Project (29)
Published on

ಬೆಂಗಳೂರು: ರಾಜ್ಯದೆಲ್ಲೆಡೆ ಬುಧವಾರ ಸಡಗರ ಸಂಭ್ರಮದಿಂದ 2025ನೇ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಈ ವೇಳೆ ಎಲ್ಲ ಬಡಾವಣೆಗಳಲ್ಲಿ ಭಕ್ತರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕ್ರೈಸ್ತರು ಕೂಡ ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ವರ್ಷಾಚರಣೆ ಹಿನ್ನೆಲೆ ಪ್ರಯುಕ್ತ ನಗರದ ಬನಶಂಕರಿ ದೇವಾಲಯ, ಮಲ್ಲೇಶ್ವರದ ಸರ್ಕಲ್ ಮಾರಮ್ಮ, ರಾಜಾಜಿನಗರದ ಇಸ್ಕಾನ್, ಬಸವನಗುಡಿಯ ದೊಡ್ಡ ಗಣಪತಿ, ವೈಯಾಲಿಕಾವಲ್‌ನ ತಿರುಪತಿ ತಿರುಮಲ ದೇವಾಲಯ (ಟಿಟಿಡಿ), ಗವಿಪುರದ ಗವಿಗಂಗಾಧರೇಶ್ವರ ಸ್ವಾಮಿ ದೇಗುಲ, ಮಾರುಕಟ್ಟೆ ಸಮೀಪದ ಕೋಟೆ ವೆಂಕಟರಮಣ ಸ್ವಾಮಿ, ವಿಭೂತಿಪುರದ ಶ್ರೀ ವೀರಭದ್ರಸ್ವಾಮಿ ಸೇರಿ ಹೆಚ್ಚಿನ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು.

ಧನುರ್ಮಾಸದ ಹಿನ್ನೆಲೆ ದೇವಾಲಯಗಳಲ್ಲಿ ಬೆಳಗಿನ ಜಾವ ಪೂಜೆ ನಡೆಯುವುದರಿಂದ ವರ್ಷದ ಮೊದಲ ದಿನ ಮುಂಜಾನೆಯೇ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದು ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥಿಸಿದರು. ಕೆಲವರು ತಾವು ಖರೀದಿಸಿದ್ದ ವಾಹನಗಳಿಗೆ ವಾಹನಗಳಿಗೆ ದೇಗುಲ ಬಳಿ ಪೂಜೆ ಮಾಡಿಸಿದರು.

ವಿಶೇಷ ಅಲಂಕಾರ:

ವಿಭೂತಿಪುರದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಭದ್ರಕಾಳಿ ಮತ್ತು ಜಗದ್ಗುರು ರೇಣುಕಾಚಾರ್ಯರಿಗೆ ಆಕರ್ಷಕ ಹೂವಿನ ಅಲಂಕಾರ ಮಾಡಲಾಗಿತ್ತು. 2025ನೇ ವರ್ಷ ನಾಡಿನ ಎಲ್ಲರಿಗೂ ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂತೋಷ ನೀಡಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬನಶಂಕರಿ ದೇವಾಲಯದಲ್ಲಿ ಕಣ್ಮನ ಸೆಳೆಯುವ ಪುಷ್ಪಾಲಂಕಾರ ಮಾಡಲಾಗಿತ್ತು. ದೊಡ್ಡ ಗಣಪತಿ ದೇವರಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಇಸ್ಕಾನ್‌ನಲ್ಲಿ ಲೋಕಕಲ್ಯಾಣಾರ್ಥ ನರಸಿಂಹಸ್ವಾಮಿ ಹೋಮ ನಡೆಸಲಾಯಿತು.

ಒಟ್ಟಾರೆ ಹೊಸ ವರ್ಷದ ಮೊದಲ ದಿನ ದೇವರ ದರ್ಶನದೊಂದಿಗೆ ಕೆಲಸಗಳು ಆರಂಭಿಸಿದರೆ, ವರ್ಷ ಪೂರ್ತಿ ಯಾವುದೇ ಅಡೆತಡೆಯಿಲ್ಲದೆ ಕೆಲಸ ಕಾರ್ಯಗಳು ಸಿದ್ಧಿಸಲಿವೆ ಎಂಬ ನಂಬಿಕೆಯೊಂದಿಗೆ ಭಕ್ತರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net