

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವ್ಯಸನವೆಂಬುದು ಪ್ರಾಣಿಯು ಬೋನಿಗೆ ಬಿದ್ದಂತೆ. ಬೋನಿನೊಳಗೆ ಬಿದ್ದರೆ ಹೊರ ಬರಲು ಕಷ್ಟ. ಕುಡಿತ ಮಾಡುವುದರಿಂದ ಮನುಷ್ಯನ ಆಯುಷ್ಯ ಕಡಿಮೆ ಆಗುವುದರೊಂದಿಗೆ ಘನತೆ ಗೌರವಕ್ಕೆ ಕುಂದು ಬರುತ್ತದೆ. ದುರಾದೃಷ್ಟವೆಂದರೆ ಸಿನಿಮಾಗಳಲ್ಲಿ ಸ್ನೇಹಿತರು ಸೇರಿದ ಕೂಡಲೇ ಮದ್ಯಪಾನ, ಧೂಮಪಾನ ಮುಂತಾದ ದೃಶ್ಯಗಳು ಇರುತ್ತವೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ 234ನೇ ವಿಶೇಷ ಮದ್ಯವರ್ಜನ ಶಿಬಿರದ 66 ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕುಡಿತ ಬಿಟ್ಟು ಶುದ್ಧ ಆದ ಮೇಲೆ ಮತ್ತೆ ಮೈಲಿಗೆ ಆಗದ ಹಾಗೆ ನೋಡಿಕೊಳ್ಳಬೇಕು. ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಶ್ರಮವಹಿಸಿಕೊಂಡು ಜಾಗರೂಕತೆಯಿಂದ ಜೀವನ ನಡೆಸಬೇಕು. ವ್ಯಸನಿಗಳ ಸಂಕಲ್ಪಕ್ಕೆ ಪ್ರೇರಣೆ ಕೊಡುವುದೇ ಈ ಮದ್ಯವರ್ಜನ ಶಿಬಿರದ ಉದ್ದೇಶ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್‌ಎಸ್.ಎಸ್. ಮಾತನಾಡಿ, ಪುರ್ನಜನ್ಮ ಕೊಡುವ ವ್ಯವಸ್ಥೆ ಈ ಮದ್ಯವರ್ಜನ ಶಿಬಿರ ಎಂದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಸ್ ಕುಟುಂಬ ದಿನ ಕಾರ್ಯಕ್ರಮ ನೆರವೇರಿಸಿದರು. ಯೋಜನಾಧಿಕಾರಿ ಮಾಧವಗೌಡ, ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ನೇತ್ರಾವತಿ ಸಹಕರಿಸಿದರು. ಮುಂದಿನ ವಿಶೇಷ ಶಿಬಿರವು ನ.4ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.