ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಕಿಡಿ

SRP_19-01jpj
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ವಿರೇಂದ್ರ ಅವರ ವಿರುದ್ಧ ಅಪಪ್ರಚಾರ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಹಿಂದು, ದಸಂಸ ಮತ್ತು ಕನ್ನಡಪರ ಹೋರಾಟ ಹಾಗೂ ಸ್ತ್ರೀ ಶಕ್ತಿ ಸಂಘಟನೆಗಳ ಮುಖಂಡರು ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
Published on

ಶ್ರೀರಂಗಪಟ್ಟಣ: ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಸುವ ಮೂಲಕ ಹಿಂದು ದೇವಾಲಯಗಳ ಪಾವಿತ್ರೃದ ತೇಜೋವಧೆಗೆ ಯತ್ನಿಸುತ್ತಿರುವ ದುಷ್ಟ ಸಂಘಟನೆಗಳು ಹಾಗೂ ಕೆಲ ನಕಲಿ ಯೂಟ್ಯೂಬರ್ಸ್‌ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು, ವಿವಿಧ ಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಮಂಗಳವಾರ ಜಮಾವಣೆಗೊಂಡ ಹಿಂದೂ ಜಾಗರಣ ವೇದಿಕೆ, ಭೂಮಿ ತಾಯಿ ಹೋರಾಟ ಸಮಿತಿ, ಮಂಡ್ಯ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕೆಂಪೇಗೌಡ ಒಕ್ಕಲಿಗ ಸಂಘಟನೆ, ಅಲಯನ್ಸ್ ಐಕ್ಯ, ಕಾಮಧೇನು ಸ್ತ್ರೀಶಕ್ತಿ ಸಂಘ ಮತ್ತು ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಸದಸ್ಯರು ಸೇರಿದಂತೆ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿಯ ಎದುರು ಸುಮಾರು 2 ತಾಸು ಧರಣಿ ಕುಳಿತು ಘೋಷಣೆ ಕೂಗಿದರು.

ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಭಾರತದ ಸರ್ವಧರ್ಮ ಸಾಮರಸ್ಯ ಕದಡಲು ಹಲವು ರಾಜಕೀಯ ಮುಸುಕುಧಾರಿಗಳು ಪರೋಕ್ಷವಾಗಿ ಯತ್ನಿಸುತ್ತಿದ್ದು, ಹಿಂದು ಧರ್ಮ ಹಾಗೂ ಹಿಂದುಗಳ ಭಾವನೆಗೆ ಧಕ್ಕೆ ತರಲು ನಮ್ಮ ಪವಿತ್ರ ಪುಣ್ಯ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಆಧಾರ ರಹಿತವಾಗಿ ಸಲ್ಲದ ಆರೋಪ ಹೊರಿಸಿ ಅವಹೇಳನ ಹಾಗೂ ಅಪಪ್ರಚಾರ ಮಾಡಿರುವುದು ಖಂಡನೀಯ ಎಂದರು.

ಜಿಲ್ಲಾ ಜನಜಾಗೃತಿ ಸದಸ್ಯ ಚಂದಗಾಲು ಶಿವಣ್ಣ ಮಾತನಾಡಿ, ರಾಜ್ಯ ಸರ್ಕಾರ ಮೃತ ಸೌಜನ್ಯಳ ಸಾವಿನ ನಿಷ್ಪಕ್ಷಪಾತ ತನಿಖೆಯೊಂದಿಗೆ ಕ್ರಮ ಕೈಗೊಳ್ಳುವ ಜತೆಗೆ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಎಸಗಿದ ಕಿಡಿಗೇಡಿಗಳ ವಿರುದ್ಧವೂ ಯಾವ ರಾಜಕೀಯ ಮಾಡದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುರಸಭಾ ಸದಸ್ಯ ಗಂಜಾಂ ಕೃಷ್ಣಪ್ಪ ಮಾತನಾಡಿ ರಾಜ್ಯಾದ್ಯಂತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೆ ಪಕ್ಷಾತೀತವಾಗಿ ವಿವಿಧ ಹಿಂದು, ಸಾಮಾಜಿಕ ಹಾಗೂ ಕನ್ನಡಪರ ಹೋರಾಟ ಸಂಘಟನೆಗಳ ಜತೆಗೆ ಒಂದಾಗಿ ಧರ್ಮಸ್ಥಳ ಮತ್ತು ಡಾ.ವೀರೇಂದ್ರ ಹೆಗ್ಗಡೆ ಅವರ ಜತೆಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ನೀಡುತ್ತಿವೆ. ಇಂತಹ ಸೂಕ್ಷ್ಮವಿಚಾರದಲ್ಲಿ ರಾಜ್ಯ ಸರ್ಕಾರ ಮೃದು ಧೋರಣೆ ತೋರಬಾರದು ಎಂದರು.

ಮರವೇ ಅಧ್ಯಕ್ಷ ಶಂಕರ್ ಬಾಬು ಮಾತನಾಡಿ, ವಿಶ್ವದಾದ್ಯಂತ ಧರ್ಮಸ್ಥಳ, ಧರ್ಮಾಧಿಕಾರಿ ಹಾಗೂ ಕರ್ನಾಟಕ ಮಾನ ಕಳೆದ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣನವರ್, ಯೂಟ್ಯೂಬರ್ ಸಮೀರ್, ಮುಸುಕುಧಾರಿ ಸೇರಿದಂತೆ ಹಲವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ 2700 ಕನ್ನಡಪರ ಹೋರಾಟ ಸಂಘಟನೆಗಳೊಂದಿಗೆ ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಇದೇ ವೇಳೆ ನೆರೆದಿದ್ದ ಮಹಿಳಾ ಹೋರಾಟಗಾರರು ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಡಾ.ವೀರೇಂದ್ರ ಹೆಗ್ಗಡೆ ಅವರ ವಿರೋಧಿಗಳ ಪರ ಮೃದುಧೋರಣೆ ಅನುಸರಿಸಿ ಯಾವುದೇ ಕ್ರಮ ಕೈಗೊಳ್ಳದೆ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಾಲು ಸಾಲು ಘೋಷಣೆ ಕೂಗಿ ಬಳಿಕ ತಹಸೀಲ್ದಾರ್ ಚೇತನಾ ಯಾದವ್ ಅವರ ಮೂಲಕ ಸರ್ಕಾರಕ್ಕೆ ತಮ್ಮ ಮನವಿ ರವಾನಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಟಿ.ಎಂ.ಹೊಸೂರು ಮಹದೇವು, ಕರವೇ ಚಂದಗಾಲು ಶಂಕರ್, ಹಿಂದು ಮುಖಂಡ ಚಂದನ್, ಉಮೇಶ್ ಕುಮಾರ್, ಬಿ.ಎಸ್.ರಮೇಶ್, ಸಬ್ಬನಕುಪ್ಪೆ ಮಂಜುನಾಥ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಪುರಸಭಾ ಮಾಜಿ ಸದಸ್ಯೆ ನಳಿನಾ, ಸಮಾಜ ಸೇವಕಿಯರಾದ ಲಯನ್ ಸರಸ್ವತಿ, ಆಶಾಲತಾ ಪುಟ್ಟೇಗೌಡ, ವಿಶಾಲಾಕ್ಷೀ, ಗಾಯತ್ರಿ, ಸಾವಿತ್ರಿ ಇತರರು ಈ ವೇಳೆ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net