ನಿವೇಶನಕ್ಕೆ ಮೀಸಲಿಟ್ಟ ಜಾಗದಲ್ಲಿ ಉಳುಮೆ

FotoJet
Published on

ಖಾಸಗಿ ವ್ಯಕ್ತಿ ನಡೆಗೆ ವಿರೋಧ ಕಡೇಹಳ್ಳಿ ಗ್ರಾಮಸ್ಥರಿಂದ ಗುಡಿಸಲು ನಿರ್ಮಿಸಿ ಪ್ರತಿಭಟನೆ

ಗುಡಿಬಂಡೆ: ಬಡವರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಮಂಜೂರು ಮಾಡಿರುವ ಜಾಗದಲ್ಲಿ ಗುರುವಾರ ಖಾಸಗಿ ವ್ಯಕ್ತಿಗಳು ಉಳುಮೆ ಮಾಡುತ್ತಿದ್ದುದ್ದನ್ನು ತಡೆದ ಕಡೇಹಳ್ಳಿ ಗ್ರಾಮಸ್ಥರು ಅದೇ ಜಾಗದಲ್ಲಿ ಗುಡಿಸಲು ನಿರ್ಮಿಸಿ ಪ್ರತಿಭಟನೆ ನಡೆಸಿದ್ದಾರೆ.

ತಾಲೂಕಿನ ಹಂಪಸಂದ್ರ ಪಂಚಾಯಿತಿಯ ಕಡೇಹಳ್ಳಿ ಮುಖ್ಯರಸ್ತೆ ವಿಸ್ತರಣೆ ವೇಳೆ ಹಲವರು ಮನೆ ಕಳೆದುಕೊಂಡಿದ್ದು, ಬದಲಿಯಾಗಿ ಅವರಿಗೆ ನಿವೇಶನ ನೀಡಲು ಗ್ರಾಮದ ಸರ್ವೇ ನಂ.131ರಲ್ಲಿ 2.15 ಎಕರೆ ಜಮೀನನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ ಎಂದು ಕಡೇಹಳ್ಳಿಯ ದಲಿತ ಮುಖಂಡ ಕದಿರಪ್ಪ ತಿಳಿಸಿದರು. ಆದರೆ, ಓಬನ್ನಗಾರಿಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದ್ದೇವೆಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ನಿವೇಶನಗಳಿಗೆ ಮೀಸಲಿರುವ ಜಾಗಕ್ಕೆ ಯಾರೂ ಅತಿಕ್ರಮಣ ಮಾಡದಂತೆ ತಹಸೀಲ್ದಾರ್ ಕೂಡ ಎಚ್ಚರಿಕೆ ಲಕ ಅಳವಡಿಸಿದ್ದಾರೆ. ಆದರೂ ಉಳುಮೆ ಮಾಡುತ್ತಿದ್ದು, ಮನೆ ಕಳೆದುಕೊಂಡಿರುವ ನಾವು ಕೂಡ ಸ್ವಯಂಪ್ರೇರಿತರಾಗಿ ಗುಡಿಸಿಲು ನಿರ್ಮಿಸಿಕೊಳ್ಳುತ್ತಿದ್ದೇವೆ. ಈ ಕೂಡಲೇ ಅಧಿಕಾರಿಗಳು ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿವೇಶನ ಹಂಚಿಕೆ ಮಾಡಿ

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಂಪಸಂದ್ರ ಆದಿನಾರಾಯಣಪ್ಪ ಮಾತನಾಡಿ, ಕಡೇಹಳ್ಳಿ ಗ್ರಾಮಸ್ಥರಿಗಾಗಿ ಜಮೀನು ಮಂಜೂರು ಮಾಡಿ ಆಶ್ರಯ ಯೋಜನೆಯಡಿ ನಿವೇಶನ ವಿತರಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚಿಸಿದ್ದಾರೆ. ಪಹಣಿಯಲ್ಲೂ ನಮೂದಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ನಿವೇಶನ ಮಂಜೂರು ಮಾಡಲು ನಿರ್ಲಕ್ಷ್ಯ ತೋರಿ, ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಲು ದಾರಿ ಮಾಡಿಕೊಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕೂಡಲೇ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ಬಡವರಿಗೆ ನಿವೇಶನ ನೀಡಲು ಮಂಜೂರು ಮಾಡಿರುವ ಜಮೀನಿನ ಮೇಲೆ ತಡೆಯಾಜ್ಞೆ ತಂದಿರುವ ವ್ಯಕ್ತಿಗಳಿಗೆ ಈಗಾಗಲೇ ಇದೇ ಸರ್ವೇ ನಂ.ನಲ್ಲಿ 3 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ಆದರೂ ಬಡವರಿಗೆ ಮೀಸಲಾಗಿರುವ ಜಾಗವೂ ಬೇಕೆಂದು ಕೇಳುವುದು ಸರಿಯಲ್ಲ. ಹಾಗಾಗಿ ಅಧಿಕಾರಿಗಳು ತುರ್ತಾಗಿ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದರು. ಗುಡಿಬಂಡೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಡೇಹಳ್ಳಿ ಗ್ರಾಮಸ್ಥರಾದ ಆದಿನಾರಾಯಣಪ್ಪ, ಚಿಕ್ಕತಿಪ್ಪಣ್ಣ, ಗಂಗಪ್ಪ, ಜಿ.ನಾರಾಯಣಪ್ಪ, ಕೆ.ಎನ್.ಆದಿನಾರಾಯಣಪ್ಪ, ಆದಿಲಕ್ಷ್ಮಮ್ಮ, ರತ್ನಮ್ಮ, ನರಸಮ್ಮ, ಮುದ್ದು ಗಂಗಮ್ಮ, ನಾರಾಯಣಮ್ಮ, ಲಕ್ಷ್ಮೀದೇವಮ್ಮ ಸೇರಿ ತಾಲೂಕಿನ ದಲಿತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net