ಮುಸ್ಲಿಂ ಧರ್ಮಗುರು ಮನೆಗೆ ಎಸ್ಪಿ ಭೇಟಿ

ಮುಸ್ಲಿಂ ಧರ್ಮಗುರು ಮನೆಗೆ ಎಸ್ಪಿ ಭೇಟಿ
Published on

ಹನೂರು: ಪಟ್ಟಣ ಸಮೀಪದ ಆರ್.ಎಸ್ ದೊಡ್ಡಿಯಲ್ಲಿ ಕಳ್ಳತನವಾಗಿದ್ದ ಮುಸ್ಲಿಂ ಧರ್ಮಗುರುಗಳ ಮನೆಗೆ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ.ಟಿ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರ್.ಎಸ್ ದೊಡ್ಡಿಯಲ್ಲಿ ವಾಸವಾಗಿರುವ ಸಬೀರ್ ಆಹಮದ್ ಅವರು ಮದುವೆ ನಿಮಿತ್ತ ಗುಂಡ್ಲುಪೇಟೆಗೆ ತೆರಳಿದ್ದು, 5 ದಿನಗಳ ಬಳಿಕ ಅ.23 ರಂದು ಮನೆಗೆ ಬಂದಿದ್ದಾಗ 233 ಗ್ರಾಂ ಚಿನ್ನ ಹಾಗೂ 20 ಸಾವಿರ ರೂ. ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಲ್ಲಾ ಬೆರಳಚ್ಚು ಹಾಗೂ ಶ್ವಾನದಳದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಎಸ್ಪಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರು ಹಾಗೂ ಪೊಲೀಸರಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು. ಈ ಸಂಬಂಧ ಹೆಚ್ಚಿನ ನಿಗಾ ವಹಿಸುವಂತೆ ಪೋಲಿಸರಿಗೆ ಸೂಚಿಸಿದರು.

ಶೀಘ್ರದಲ್ಲೇ ಕಳ್ಳರ ಪತ್ತೆ: ಎಸ್ಪಿ ಡಾ.ಬಿ.ಟಿ ಕವಿತಾ ವಿಜಯವಾಣಿಯೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಕಳ್ಳತನವಾಗಿರುವ ಕೆಲವು ಕಡೆಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಹಾಗೆಯೇ ಹನೂರು ಭಾಗದಲ್ಲೂ ನಡೆದಿರುವ ಕಳ್ಳತನ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಶೀಘ್ರದಲ್ಲಿಯೇ ಕಳ್ಳರನ್ನು ಪತ್ತೆಹೆಚ್ಚಲಾಗುವುದು. ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮವಹಿಸಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ. ಅಧಿಕಾರಿಗಳಿಗೆ ಅಗತ್ಯ ಸೂಚನೆಯನ್ನು ನೀಡಲಾಗಿದೆ. ಇನ್ನು ಕಳ್ಳತನದ ಬಗ್ಗೆ ಅವಲೋಕಿಸಿದಾಗ ಮದುವೆ, ಶುಭ ಸಮಾರಂಭ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳುವವರ ಮನೆಗಳಿಗೆ ಬೀಗ ಹಾಕಿರುವುದನ್ನು ಕಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ. ಆದ್ದರಿಂದ ಬೇರೆಡೆಗೆ ತೆರಳುವವರು ಪೊಲೀಸರಿಗೆ ಮಾಹಿತಿ ತಿಳಿಸಿದರೆ ಮನೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಇದರಿಂದ ಕಳ್ಳತನ ತಡೆಗಟ್ಟಬಹುದು. ಈ ಸಂಬಂಧ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್ ಜಗದೀಶ್ ಶಿವಮಾದಯ್ಯ, ಶೇಷಾದ್ರಿ, ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net