ನಂಜೇಒಡೆಯರದೊಡ್ಡಿಗೆ ಎಸ್ಪಿ ಭೇಟಿ

05 HANUR 5
Published on

ಹನೂರು: ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆಯ ಕಿವಿಯೋಲೆ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಬಿ.ಕವಿತಾ ಅವರು ತಾಲೂಕಿನ ನಂಜೇಒಡೆಯರದೊಡ್ಡಿ ಸಮೀಪದ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು.


ತಾಲೂಕಿನ ಭೈರನತ್ತ ಗ್ರಾಮದ ರಾಜಮ್ಮ ಅವರು ಜು.31ರಂದು ನಂಜೇಒಡೆಯರದೊಡ್ಡಿ ಸಮೀಪದ ಜಮೀನೊಂದರಲ್ಲಿ ಬೇವಿನಬೀಜ ಸಂಗ್ರಹಿಸುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಾಹಿತಿ ಕೇಳುವ ನೆಪದಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿ ಚಿನ್ನದ ಕಿವಿಯೋಲೆಯನ್ನು ಕಸಿದು ಪರಾರಿಯಾಗಿದ್ದರು.


ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಎಸ್ಪಿ ಅವರು ಪರಿಶೀಲನೆ ನಡೆಸಿ ರಾಜಮ್ಮ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.


ಎಸ್ಪಿ ಕವಿತಾ ಅವರು ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಅವರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಕಾರ್ಯನಿರತರಾಗಿದ್ದಾರೆ. ಶೀಘ್ರದಲ್ಲಿಯೇ ಬಂಧಿಸಲಿದ್ದಾರೆ. ಮಹಿಳೆಗೆ ಕಿವಿಯೋಲೆಯನ್ನು ವಾಪಸ್ ಕೊಡಿಸುವ ಕಾರ್ಯ ನಡೆಯಲಿದೆ. ಹಳ್ಳಿಗಳಲ್ಲಿ ಸಂಜೆ 6ರಿಂದ ರಾತ್ರಿ 9ರವರೆಗೆ ಪೊಲೀಸ್ ಗಸ್ತು ನಿಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರಿಂದ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಇದಕ್ಕೆ ಗ್ರಾಮಸ್ಥರ ಸಹಕಾರವೂ ಮುಖ್ಯ ಎಂದು ತಿಳಿಸಿದರು.


ಡಿವೈಎಸ್ಪಿ ಧರ್ಮೇಂದ್ರ, ಇನ್ಸ್‌ಪೆಕ್ಟರ್ ಶಶಿಕುಮಾರ್, ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net