ಎಸ್‌ಪಿ ಕಚೇರಿ ಆವರಣದಲ್ಲಿ ಮಹಿಳೆ ಆತ್ಮಹತ್ಯೆಗೆ ಯತ್ನ

SP, office, premises, woman, suicide,
Published on

ದಾವಣಗೆರೆ: ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಜಿಲ್ಲಾ ಎಸ್‌ಪಿ ಕಚೇರಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಚನ್ನಗಿರಿ ತಾಲೂಕು ಸಂತೇಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿವಕೊಳೆನೂರು ಗ್ರಾಮದ ವೇದಾವತಿ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.

ಆಸ್ತಿಯ ವ್ಯಾಜ್ಯದ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಗಂಡನ ಅಣ್ಣ ವೆಂಕಟೇಶ ಮತ್ತು ಅವರ ಮನೆಯ ಕಡೆಯವರ ವಿರುದ್ಧ ಜಿಲ್ಲಾ ಪೊಲೀಸ್ ಕಚೇರಿಗೆ ದೂರು ನೀಡಲು ಆಗಮಿಸಿದ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡುವ ಮೊದಲೇ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ.

ಕೂಡಲೇ 112 ವಾಹನವನ್ನು ಕರೆಯಿಸಿ ಪೊಲೀಸ್ ಸಿಬ್ಬಂದಿಯೊಂದಿಗೆ ಮಹಿಳೆಯನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದ್ದು, ಸದರಿ ಮಹಿಳೆ ಮತ್ತು ಅವರ ಪತಿಯ ಸಹೋದರ ಹಾಗೂ ಕುಟುಂಬದೊಂದಿಗೆ ಸುಮಾರು ಏಳೆಂಟು ವರ್ಷಗಳಿಂದ ಆಸ್ತಿ ವ್ಯಾಜ್ಯ ನಡೆಯುತ್ತಿರುವುದು ತಿಳಿದುಬಂದಿದೆ.

ಮಹಿಳೆಯಿಂದ ದೂರು ಅರ್ಜಿ ಪಡೆದು ದೂರು ಅರ್ಜಿಯ ವಿಚಾರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ನೀಡಲಾಗಿದೆ. ಮಹಿಳೆ ನೀಡಿರುವ ದೂರು ಅರ್ಜಿ ಪರಿಶೀಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳ ಅಭಿಪ್ರಾಯ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net