ಜಿಲ್ಲೆಯಲ್ಲಿ 1.28 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ

Former
Published on

ಉತ್ತಮ ಮುಂಗಾರು ಮಳೆ ನಿರೀಕ್ಷೆ ಭೂಮಿ ಹದ ಮಾಡುವ ಕಾರ್ಯ ಆರಂಭಿಸಿದ ಕೃಷಿಕ

ಚಿಕ್ಕಬಳ್ಳಾಪುರ : ಮುಂಗಾರು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ರೈತರು ಮೊದಲ ಹಂತದ ಭೂಮಿ ಹದ ಮಾಡುವ ಕಾರ್ಯ ಆರಂಭಿಸಿದ್ದಾರೆ.
ಈ ಬಾರಿ ಒಟ್ಟು 1,28,175 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈ ಪೈಕಿ ಏಕದಳ ಧಾನ್ಯ 1,01,345 ಹೆಕ್ಟೇರ್‌ನಲ್ಲಿ, ದ್ವಿದಳ ಧಾನ್ಯ 6,057 ಹೆಕ್ಟೇರ್‌ನಲ್ಲಿ, ಎಣ್ಣೆಕಾಳು 20,433 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಇದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಕಳೆದ ಸಾಲಿನಲ್ಲಿ ಮಳೆಯ ತೀವ್ರ ಅಭಾವದ ಹಿನ್ನೆಲೆಯಲ್ಲಿ ಬರದ ವಾತಾವರಣ ನಿರ್ಮಾಣವಾಗಿ, ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಮುಂಗಾರು ಪೂರ್ವದಲ್ಲೇ ಜಿಲ್ಲೆಯ ವಿವಿಧೆಡೆ ಉತ್ತಮವಾಗಿ ಮಳೆ ಸುರಿದಿದ್ದು, ಬಹುತೇಕ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲೂ ಉತ್ತಮ ಮಳೆ ನಿರೀಕ್ಷೆ ಹೊಂದಲಾಗಿದೆ. ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶಿಸಲಿದ್ದು, ಭಾರಿ ಮಳೆ ಸುರಿಯುವ ವರದಿಯನ್ನು ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ಮಣ್ಣು ತೇವಾಂಶದಿಂದ ಕೂಡಿದ್ದು, ರೈತರು ಮೊದಲ ಹಂತದ ಭೂಮಿ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಎರಡೂ ಕೈ ಕೊಟ್ಟಿತ್ತು. ಈ ಬಾರಿಯೂ ಹವಾಮಾನ ವೈಪರೀತ್ಯ, ಕೃಷಿ ಜಮೀನಿನ ಫಲವತ್ತತೆ, ರೈತರ ಒಲವಿನ ಲೆಕ್ಕಾಚಾರದಲ್ಲಿ ಬಿತ್ತನೆಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎನ್ನಲಾಗಿದೆ.
ಕೃಷಿ ಇಲಾಖೆ ಸಿದ್ಧತೆ
ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆಗೆ ಹೆಸರುವಾಸಿಯಾಗಿರುವ ಈ ಭಾಗದಲ್ಲಿ 1,40,975 ಅತಿ ಸಣ್ಣ ರೈತರು, 45637 ಸಣ್ಣ ರೈತರು ಮತ್ತು 27743 ಇತರ ರೈತರಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರೈತರು ರಾಗಿ, ಮುಸುಕಿನಜೋಳ, ತೊಗರಿ, ಅಲಸಂದೆ, ನೆಲಗಡಲೆ ಮತ್ತು ನವಣೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿರುವ 26 ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ, ನಿಯಮಾನುಸಾರ ಅಗತ್ಯ ರಸಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಕೇಂದ್ರ ಕಚೇರಿಗೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. ಇನ್ನು ಜಿಲ್ಲೆಗೆ ಹಂತ ಹಂತವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ಸರಬರಾಜಾಗಲಿದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳು ಮಾತು.
ರಸಗೊಬ್ಬರಕ್ಕೆ ಬೇಡಿಕೆ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ 40 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಮತ್ತು 4 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆ ಇದೆ. ಇದುವರೆಗೂ ಈ ಭಾಗದಲ್ಲಿ ಮಳೆ ಹಾನಿ ಪ್ರಕರಣ ವರದಿಯಾಗಿಲ್ಲ. ಪ್ರಸ್ತುತ ಮುಂಗಾರು ಹಂಗಾಮಿಗೆ ಕೃಷಿ ಚಟುವಟಿಕೆ ಸಿದ್ಧತೆ ಕಡೆ ಗಮನ ಹರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net