

* ರಸಗೊಬ್ಬರ, ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ
ರಾಮನಗರ: ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದೆ, ಪೂರ್ವ ಮುಂಗಾರು ಜಿಲ್ಲೆಯಲ್ಲಿ ಉತ್ತಮವಾಗಿ ಸುರಿದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಒಟ್ಟು ೮೧,೪೨೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ರಾಗಿ ಪ್ರಮುಖವಾದ ಬೆಳೆಯಾಗಿದ್ದು, ಸುಮಾರಿಗೆ ೬೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಉಳಿದಂತೆ ಇದರ ಜತೆಗೆ ಈಗಾಗಲೇ ಭತ್ತ, ನೆಲಗಡಲೆ, ಅವರೆ, ತೊಗರಿ ಸೇರಿ ಇತರೆ ಬೆಳಗಳ ಬಿತ್ತನೆ ಕಾರ್ಯಕ್ಕೂ ಸಿದ್ಧತೆ ನಡೆದಿದೆ. ಇದಕ್ಕೆ ಮಳೆಯೂ ಉತ್ತಮ ಸಾಥ್ ನೀಡಬೇಕಿದೆ. ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಂಗಾಮಿನಲ್ಲಿ 495 ಹೆಕ್ಟೇರ್‌ನಲ್ಲಿ ಎಳ್ಳು, 92 ಹೆಕ್ಟೇರ್‌ನಲ್ಲಿ ಅಲಸಂದೆ. 25 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಒಟ್ಟಾರೆ 612 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಈ ಬಾರಿ ಬಿಸಿಲ ಬೇಗೆ ಹೆಚ್ಚಿದ್ದರೂ ಮಳೆಯೂ ಉತ್ತಮವಾಗಿ ಸುರಿದ ಪರಿಣಾಮ ಕೃಷಿ ಚಟುವಟಿಕೆಗೆ ಸಹಕಾರಿ ಆಗಿದೆ. ಜಿಲ್ಲೆಯಲ್ಲಿ ಜನವರಿ 1 ರಿಂದ ಜೂನ್ 3 ರವರೆಗೆ ಒಟ್ಟು ವಾಡಿಕೆ ಮಳೆ 190.1 ಮಿ.ಮೀ ಇದ್ದು, ವಾಸ್ತವ 338.1 ಮಿ.ಮೀ ಮಳೆಯಾಗಿದೆ. 2025ರ ಮೇನಲ್ಲಿ ವಾಡಿಕೆ ಮಳೆ 108.9 ಮಿ.ಮೀ ಇದ್ದು, ವಾಸ್ತವ 218.5 ಮಿ.ಮೀ ಮಳೆಯಾಗಿದೆ. ಇದು ಬಿತ್ತನೆ ಕಾರ್ಯಕ್ಕೆ ಸಹಕಾರಿಯಾಗಿದೆ.
2025 - 26 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ರಸಗೊಬ್ಬರಗಳ ಜಿಲ್ಲೆಯ ಬೇಡಿಕೆ 23797 ಮೆಟ್ರಿಕ್ ಟನ್‌ಗಳಷ್ಟು ಗುರಿ ನಿಗದಿಪಡಿಸಲಾಗಿರುತ್ತದೆ. ಪ್ರಸ್ತುತ ಮೂಲ ದಾಸ್ತಾನು ಸೇರಿ 12610 ಮೆಟ್ರಿಕ್ ಟನ್ ಸರಬರಾಜು ಆಗಿದೆ. 5420 ಮೆಟ್ರಿಕ್ ಟನ್ ವಿತರಣೆಯಾಗಿದ್ದು, 7190.19 ಮೆ.ಟನ್ ದಾಸ್ತಾನು ಲಭ್ಯವಿದೆ. . ಪ್ರಸ್ತುತ ಯಾವುದೇ ರಸಗೊಬ್ಬರದ ಕೊರತೆಯಿಲ್ಲ. 2025ರ ಮೇನಲ್ಲಿ ಜಿಲ್ಲೆಯಲ್ಲಿ ವಿವಿಧ ರಸಗೊಬ್ಬರಗಳ ಒಟ್ಟು 3500 ಮೆಟ್ರಿಕ್ ಟನ್‌ಗಳ ಸರಬರಾಜು ಯೋಜನೆ ಇದೆ.
ಜಿಲ್ಲೆಯಲ್ಲಿ ಮಳೆ ಆಗುತ್ತಿರುವ ಕಾರಣ ರೈತರು ಭೂಮಿಯನ್ನು ಹಸನು ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂಗಾರು ಆರಂಭದಲ್ಲಿಯೇ ಅಬ್ಬರಿಸಿದೆ, ಇದರ ಜತೆಗೆ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ರೈತರು ರಾಗಿ ಸೇರಿ ಇತರೆ ಬೆಳೆಗಳ ಬಿತ್ತನೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಇಲಾಖೆ ಇದಕ್ಕೆ ಪೂರಕವಾಗಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲು ಸಿದ್ಧಗೊಂಡಿದೆ.
ಈ ಬಾರಿ ಉತ್ತಮ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ಕೃಷಿ ಇಲಾಖೆ ರೈತರ ನೆರವಿಗೆ ಧಾವಿಸಲು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಿದ್ಧತೆ ಮಾಡಿಕೊಂಡಿದೆ. ಕೃಷಿ ಕ್ಷೇತ್ರಗಳಿಗೆ `ಭೇಟಿ ನೀಡುವ ಮೂಲಕ ಕೃಷಿ ಚಟುವಟಿಕೆಗಳ ಸಂಬಂಧ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. | ಅಂಬಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರ
===