ಲೋಪವಾಗದಂತೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ

29CBP4
Published on

ದೂರು ಹಿನ್ನೆಲೆಯಲ್ಲಿ ಕೃಷಿ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ- ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ದಾಸ್ತಾನು

ಚಿಕ್ಕಬಳ್ಳಾಪುರ: ರೈತರ ದೂರಿನ ಹಿನ್ನೆಲೆಯಲ್ಲಿ ತಾಲೂಕು ಕೃಷಿ ಇಲಾಖೆ ಯಾವುದೇ ಲೋಪಗಳಿಗೆ ಅವಕಾಶ ನೀಡದೇ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಈ ಭಾಗದಲ್ಲಿ ಮುಂಗಾರು ಹಂಗಾಮಿಗೆ 32,874 ಹೆಕ್ಟೇರ್ ಸಾಗುವಳಿ ವಿಸ್ತೀರ್ಣ ಪೈಕಿ 13,417 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. 111 ಮಿ.ಮೀ ವಾಡಿಕೆ ಮಳೆಗೆ ಬದಲಾಗಿ ಇದುವರೆಗೆ 126 ಮಿ.ಮೀ ಮಳೆಯಾಗಿದೆ. ಶೇ.13ರಷ್ಟು ಹೆಚ್ಚು ಮಳೆಯಾಗಿದ್ದು, ರೈತರು ಕೃಷಿ ಭೂಮಿ ಸಿದ್ಧತಾ ಚಟುವಟಿಕೆಯಲ್ಲಿ ತೊಡಗಿದ್ದಾರೆ.


ಬೆಳೆ ವಿಸ್ತೀರ್ಣ ಗುರಿ
ಪ್ರಸಕ್ತ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 11110 ಹೆಕ್ಟೇರ್‌ನಲ್ಲಿ ರಾಗಿ, 1470 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 240 ಹೆಕ್ಟೇರ್ ನೆಲಗಡಲೆ, 175 ಹೆಕ್ಟೇರ್ ತೊಗರಿ, 150 ಹೆಕ್ಟೇರ್‌ನಲ್ಲಿ ಅವರೆ, 56 ಹೆಕ್ಟೇರ್‌ನಲ್ಲಿ ಅರಳು, 20 ಹೆಕ್ಟೇರ್‌ನಲ್ಲಿ ಅಲಸಂದೆ ಹಾಗೂ 15 ಹೆಕ್ಟೇರ್‌ನಲ್ಲಿ ತೃಣ ಧಾನ್ಯ ಬಿತ್ತನೆ ಗುರಿ ಹೊಂದಲಾಗಿದೆ.


ಬಿತ್ತನೆ ಬೀಜ ಲಭ್ಯತೆ
ಮುಂಗಾರು ಹಂಗಾಮಿಗೆ ಅಗತ್ಯವಾಗಿ ಬೇಕಾಗಿರುವ ಬಿತ್ತನೆ ಬೀಜಗಳನ್ನು ಮೂರು ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿದ್ದು, ರೈತರಿಗೆ ವಿತರಿಸಲಾಗುತ್ತಿದೆ. ರಾಗಿ-142.7 ಕ್ವಿಂಟಾಲ್, ತೊಗರಿ-8.15 ಕ್ವಿ, ಅಲಸಂದೆ-2.40 ಕ್ವಿಂಟಾಲ್, ನೆಲಗಡಲೆ - 45 ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಿಸುವ ಮೊದಲು ಅವುಗಳ ಮೊಳಕೆ ಪ್ರಮಾಣವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಖಾತ್ರಿ ಪಡಿಸಿಕೊಳ್ಳಲಾಗಿದೆ. ಬಿತ್ತನೆ ಬೀಜ ಮಾದರಿಗಳನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ.


ರಸಗೊಬ್ಬರ ಲಭ್ಯತೆ
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ವಿವಿಧ ರಸಗೊಬ್ಬರಗಳ ಬೇಡಿಕೆ 6053.8 ಟನ್ ಇದ್ದು, ಇದುವರೆಗೆ 5096 ಟನ್ ಸರಬರಾಜಾಗಿದ್ದು, 1759 ಟನ್ ವಿತರಣೆಯಾಗಿದೆ. 3337 ಟನ್ ರಸಗೊಬ್ಬರ ವಿವಿಧ ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ಲಭ್ಯವಿದ್ದು ರೈತರು ಅವಶ್ಯಕತೆಗನುಗುಣವಾಗಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಇಲ್ಲವೇ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂರ್ಪಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎ.ಕೇಶವರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net