ಭಾವೈಕ್ಯ ಬೆಳೆಸುವ ಸರ್ವಧರ್ಮ ಸಮ್ಮೇಳನ

ಚಿತ್ರ 13ಎಸ್ ಡಿ ಪಿ 07
Published on

ಸಿದ್ದಾಪುರ: ಸರ್ವಧರ್ಮ ಸಮನ್ವಯ ಕೇಂದ್ರಗಳಿಂದ ಶಾಂತಿ, ಸಹಬಾಳ್ವೆಯ ಜೀವನ ನಡೆಸಲು ಸಾಧ್ಯ ಎಂದು ಕನ್ನಡ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.


ಭಾವೈಕ್ಯದ ಧಾರ್ಮಿಕ ಕೇಂದ್ರ ಎಂದೇ ಹೆಸರಾಗಿರುವ ಪಾಲಿಬೆಟ್ಟದ ದರ್ಗಾ ಆವರಣದಲ್ಲಿ ಸೋಮವಾರ ಆರ್ಕಾಡ್ ಪಟ್ಟಾಣ್ ಬಾಬ ಶಾಹ್ ವಲಿಯವರ ಉರುಸ್ ಸಮಾರೋಪ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.


ಸರ್ವಧರ್ಮ ಸಮ್ಮೇಳನಗಳ ಮೂಲಕ ಭಾವೈಕ್ಯವನ್ನು ಬೆಳೆಸಬಹುದು. ಎಲ್ಲರೂ ಒಗ್ಗೂಡಿ ಆಚರಣೆ ಮಾಡಿದ್ದಲ್ಲಿ ಸಹೋದರತ್ವ ನಿರ್ಮಾಣ ಮಾಡಬಹುದು. ನಾವು ನಡೆಯುವ ದಾರಿಗಳು ಬೇರೆ ಇದ್ದರೂ ತಲುಪುವ ಗುರಿ ಮಾತ್ರ ಭಗವಂತನ ಸನ್ನಿಧಿಗೆ. ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಪ್ರತಿಯೊಬ್ಬರೂ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.


ಸಿಎಸ್‌ಐ ಚರ್ಚ್‌ನ ಫಾ.ಶಶಿಕುಮಾರ್ ಮಾತನಾಡಿ, ದೇವರು ಮಾನವನ ರೂಪದಲ್ಲಿ ಬದುಕಲು ಅವಕಾಶ ಕಲ್ಪಿಸಿದ್ದಾನೆ. ನಾವೆಲ್ಲರೂ ಶಾಂತಿ, ಸಹಬಾಳ್ವೆ, ಸಹೋದರತ್ವದೊಂದಿಗೆ ನೆಮ್ಮದಿಯ ಜೀವನ ನಡೆಸಬೇಕು. ಎಲ್ಲ ಧರ್ಮಗಳ ಬೋಧನೆಯನ್ನು ಅನುಸರಿಸಿದರೆ ನಾವು ಯಾರನ್ನೂ ದ್ವೇಷಿಸುವುದಿಲ್ಲ. ಎಲ್ಲ ಧರ್ಮಗಳ ಸಾರಾಂಶ ಒಂದೇ. ಇಂತಹ ಸರ್ವಧರ್ಮ ಸಮ್ಮೇಳನಗಳು ಹೆಚ್ಚಾಗಿ ನಡೆದಲ್ಲಿ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.


ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಪಿ ಸಹದಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಮಂದಿರ, ಮಸೀದಿಗಳನ್ನು ಬಳಸಿಕೊಂಡು ಕೋಮು ಭಾವನೆಗಳೊಂದಿಗೆ ಅಶಾಂತಿ ಸೃಷ್ಟಿಸಲು ಮುಂದಾಗುತ್ತಿರುವುದು ವಿಷಾದನೀಯ. ಜಗತ್ತಿನಲ್ಲಿ ಸರ್ವಧರ್ಮೀಯರು ಒಂದಾಗಿ ಜೀವನ ನಡೆಸುತ್ತಿರುವ ದೇಶ ಭಾರತ. ಸೂಫಿಗಳು, ಸಂತರು, ಶರಣರು, ಋಷಿಮುನಿಗಳ ಭೂಮಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಧರ್ಮೀಯರು ಒಗ್ಗೂಡಿ ದೇಶವನ್ನು ಕಟ್ಟಿದ್ದಾರೆ. ಸೂಫಿ, ಸಂತರು, ಶರಣರು ಒಟ್ಟಾಗಿ ಜೀವನ ಮಾಡುತ್ತಿದ್ದರು. ಹಾಗಾಗಿ ಎಲ್ಲ ಆಚರಣೆಗಳು ಸೌಹಾರ್ದವಾಗಿಯೇ ನಡೆಯುತ್ತಿತ್ತು. ಎಲ್ಲರೂ ಒಗ್ಗಟ್ಟಿನ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ ಎಂದು ಹೇಳಿದರು.


ಕೊಡಗು ಜಿಲ್ಲಾ ಖಾಝಿ ಎಂ.ಎಂ. ಅಬ್ದುಲ್ಲಾ ಫೈಜಿ ಮಾತನಾಡಿ, ಧಾರ್ಮಿಕ ಕೇಂದ್ರಗಳು ಸೌಹಾರ್ದತೆಯ ಸಂಕೇತ. ನಾವೆಲ್ಲರೂ ಪರಸ್ಪರ ಸ್ನೇಹದೊಂದಿಗೆ ಮುನ್ನಡೆಯಬೇಕಾಗಿದೆ ಎಂದರು.


ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಅನೀಫ್, ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಎಚ್.ಮೊಹಮ್ಮದ್ ರಾಫಿ, ಅನ್ವಾರಲ್ ಉದಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಸಹನಿ, ಪಾಲಿಬೆಟ್ಟ ಜಮಾ ಮಸೀದಿ ಸಮಿತಿ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ಹಾಜಿ, ಖತೀಬ್ ಅಲಿ ಸಖಾಫಿ, ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ನಾಸರ್, ಸಮಿತಿ ಉಪಾಧ್ಯಕ್ಷ ಸೈನುದ್ದಿನ್, ಪ್ರಧಾನ ಕಾರ್ಯದರ್ಶಿ ಸಮೀರ್ ಮುನ್ನ, ಕಾರ್ಯದರ್ಶಿ ಸಮೀರ್, ಖಜಾಂಚಿ ಮುಸ್ತಫ, ಪ್ರಮುಖರಾದ ಬಶೀರ್, ಫೈಝಲ್ ರಹಮಾನ್, ಮುನೀರ್, ಫೈಸಲ್ ಉಪಸ್ಥಿತರಿದ್ದರು. ದರ್ಗಾ ಆವರಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net