ನೆಲಮಂಗಲ ಯಾರ್ಡ್​ನಲ್ಲಿ ಹಳಿ ತಪ್ಪಿದ ರೈಲು! ರಕ್ಷಣಾ ತಂಡದಿಂದ ಚುರುಕು ಕಾರ್ಯಾಚರಣೆ

Train
Published on

ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ನೆಲಮಂಗಲ ಯಾರ್ಡ್‌ನಲ್ಲಿ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು, ಅದರಲ್ಲೂ ಒಂದು ಕೋಚ್ ಸಂಪೂರ್ಣ ಮುಗುಚಿ ಬಿದ್ದಿದೆ. ರೈಲು ಅಪಘಾತದ ಸಂದೇಶ ಲಭಿಸುತ್ತಿದ್ದಂತೆ, ಎಚ್ಚೆತ್ತುಕೊಂಡ ವಿವಿಧ ವಿಭಾಗಗಳ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಗೊಂಡಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ......

ಇದು ಅಸಲಿ ಅಘಾತವಲ್ಲ. ಆದರೆ, ರೈಲ್ವೆ ಅಪಘಾತ ಸಂಭವಿಸಿದಾಗ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಹೇಗಿರಬೇಕು? ಎಂಬುದನ್ನು ತೋರಿಸುವ ಸಲುವಾಗಿ ಅಣಕು ಕಾರ್ಯಾಚರಣೆಯನ್ನು ಬುಧವಾರ ಆಯೋಜನೆ ಮಾಡಲಾಗಿತ್ತು. ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ, ಎನ್‌ಡಿಆರ್‌ಎಫ್, ಬೆಂಗಳೂರು/10ನೇ ಬೆಟಾಲಿಯನ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ಸೇವೆಗಳ ಸಹಯೋಗದಲ್ಲಿ ನೆಲಮಂಗಲ ರೈಲು ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ಅಣಕು ಅಭ್ಯಾಸ ನಡೆಸಲಾಯಿತು.

ಉಪ ಕಮಾಂಡೆಂಟ್ ಅಖಿಲೇಶ್ ಕುಮಾರ್ ಚೌಬೆ ನೇತೃತ್ವಲ್ಲಿ 30 ಸಿಬ್ಬಂದಿಗಳನ್ನೊಳಗೊಂಡ ಎನ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ತಂಡ, 108 ಆ್ಯಂಬುಲೆನ್ಸ್, ರೈಲ್ವೇ ಇಲಾಖೆಯವೈದ್ಯಕೀಯ ತಂಡ, ಕ್ಯಾರೇಜ್ ಮತ್ತು ವ್ಯಾಗನ್, ಸಿಗ್ನಲ್ ಮತ್ತು ಟೆಲಿಕಾಂ, ಇಲೆಕ್ಟ್ರಿಕಲ್, ರೈಲ್ವೆ ಪೊಲೀಸ್ ಮತ್ತು ರೈಲ್ವೆ ರಕ್ಷಣಾ ಪಡೆ ಸೇರಿದಂತೆ ವಿವಿಧ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ರೈಲ್ವೆ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಪೂರಿಯಾ, ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಎಚ್. ವಿಜಯ ಕುಮಾರ್, ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಎಂ.ಶ್ರೀನಿವಾಸ್ ಮೇಲ್ವಿಚಾರಣೆಯಲ್ಲಿ ಅಣಕು ಅಭ್ಯಾಸ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net