ದಕ್ಷಿಣ ಕನ್ನಡ ಸಂಘದ ಯಕ್ಷ ವೈಭವ 30ರಂದು

SADANAND PERLA
Published on

ಕಲಬುರಗಿ: ದಕ್ಷಿಣ ಕನ್ನಡ ಸಂಘದ ಸಾಂಸ್ಕೃತಿಕ ಅಭಿಯಾನದಡಿ ನಗರದಲ್ಲಿ ಜು.30 ಮತ್ತು ಆ.6ರಂದು ಯಕ್ಷಗಾನ ಪ್ರದರ್ಶನಗಳ ಯಕ್ಷ ವೈಭವ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಸದಾನಂದ ಪೆರ್ಲ, ಕಾರ್ಯದರ್ಶಿ ಪುರಂದರ ಭಟ್ ತಿಳಿಸಿದ್ದಾರೆ.
ಕರಾವಳಿಯ ಎರಡು ಯಕ್ಷಗಾನ ಮೇಳಗಳು ಪ್ರದರ್ಶನ ನೀಡಲಿದ್ದು, ೩೦ರಂದು ರಾತ್ರಿ ೮ಕ್ಕೆ ರಾಮಮಂದಿರ ಎದುರಿನ ವೆಂಕಟೇಶ ಮಂಗಲ ಕಾರ್ಯಾಲಯದಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ತಂಡ ಹಿರಿಯ ಭಾಗವತ್ ರಾಘವೇಂದ್ರ ಮಯ್ಯ ನೇತೃತ್ವದಲ್ಲಿ 20 ಕಲಾವಿದರು ಚೈತ್ರ ಕೋಗಿಲೆ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಉದ್ಘಾಟಿಸುವರು. ಜಿಲ್ಲಾ ಹೋಟೆಲ್ ಬೇಕರಿ ಮತ್ತು ವಸತಿಗೃಹಗಳ ಸಂಘದ ಅಧ್ಯಕ್ಷ ಸತ್ಯನಾಥ ಶೆಟ್ಟಿ, ಕಾರ್ಯದರ್ಶಿ ನರಸಿಂಹ ಮೆಂಡನ್, ಉದ್ಯಮಿ ಮಹೇಶ ಯರಗೋಳ ಪಾಲ್ಗೊಳ್ಳುವರು. ರಾಮಮಂದಿರ ಆಡಳಿತ ಸಮಿತಿ ಅಧ್ಯಕ್ಷ ವಿದ್ಯಾಧರ ಭಟ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದ್ದಾರೆ.
ಆ.6ರಂದು ರಾತ್ರಿ ೮ಕ್ಕೆ ಕನ್ನಡ ಭವನದ ಬಯಲು ರಂಗಮಂದಿರದಲ್ಲಿ ಮಂದಾರ್ತಿಯ ನಡೂರು ಮಹಾಗಣಪತಿ ಯಕ್ಷಗಾನ ಮಂಡಳಿಯವರ ಯಕ್ಷ ಸಂಚಾರ ಬಳಗದ ಹಿರಿಯ ಭಾಗವತ ಸದಾಶಿವ ಅಮೀನ್ ನೇತೃತ್ವದಲ್ಲಿ 20 ಕಲಾವಿದರು ಶಿವದೂತ ಪಂಜುರ್ಲಿ ಎಂಬ ಪ್ರಸಂಗ ತೋರಿಸಲಿದ್ದಾರೆ. ಕಾಂತಾರ ಸಿನಿಮಾದಲ್ಲಿ ಖ್ಯಾತಿ ಪಡೆದ ಪಂಜುರ್ಲಿ ದೈವದ ಕಥಾನಕ ಒಳಗೊಂಡ ಪುಣ್ಯ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಎರಡೂ ಪ್ರದರ್ಶನಗಳಿಗೆ ಉಚಿತ ಪ್ರವೇಶವಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net