

* ಮಂಚೇಗೌಡನಪಾಳ್ಯದಲ್ಲಿ ನಿರ್ಮಾಣವಾಗಿರುವ ಕಟ್ಟಡ
* ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಆರೋಗ್ಯ ಇಲಾಖೆ
ಚೇತನ್ ಚಕ್ಕೆರೆ ಬಿಡದಿ
ಗ್ರಾಮೀಣರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿ ಎಂಬ ಸದುದ್ದೇಶದಿಂದ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದಿದೆ. ಅಂತೆಯೇ, ಮಂಚೇಗೌಡನಪಾಳ್ಯ ಗ್ರಾಮದ ಬಳಿ ಆಯುಷ್ಮಾನ್ ಆರೋಗ್ಯ ಕೇಂದ್ರ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಉದ್ಘಾಟನಾ ಭಾಗ್ಯ ಸಿಕ್ಕಿರಲಿಲ್ಲ. ಜನರ ಹೋರಾಟಕ್ಕೆ ಮಣಿದು ಈಗ ಲೋಕಾರ್ಪಣೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಮಂಚೇಗೌಡನಪಾಳ್ಯ ಗ್ರಾಮ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈ ಹಿಂದೆ ಸ್ಥಾಪನೆ ಮಾಡಲಾಗಿತ್ತು. ಈ ಕಟ್ಟಡ ತುಂಬಾ ಹಳೆಯದಾಗಿ ಮಳೆ ಬಂದರೆ ಸೋರುತ್ತಿದ್ದ ಕಾರಣ ಈ ಹಿಂದೆ ಶಾಸಕರಾಗಿದ್ದ ಎ.ಮಂಜುನಾಥ್ ಅವರು ಆರೋಗ್ಯ ಇಲಾಖೆ ಜತೆ ಚರ್ಚಿಸಿ ಸುಸಜ್ಜಿತ ಆರೋಗ್ಯ ಕೇಂದ್ರ ಕಟ್ಟಡ ಮಂಜೂರು ಮಾಡಿಸಿ, ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು.
ಕೇಂದ್ರದ ಕಟ್ಟಡ ನಿರ್ಮಾಣವಾಗಿ ಒಂದೂವರೆ ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಸಿಕ್ಕಿರಲಿಲ್ಲ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಜನಪ್ರತಿನಿಧಿಗಳ ಅಸಡ್ಡೆಯಿಂದ ಈ ಕಟ್ಟಡ ಉದ್ಘಾಟನೆಗೂ ಮುನ್ನವೇ ಹಾಳು ಕೊಂಪೆಯಾಗಿ ಮಾರ್ಪಟ್ಟಿತ್ತು. ಕಟ್ಟಡದ ಸುತ್ತ ಅನೈತಿಕ ಚಟುವಟಿಕೆ ನಡೆಯುತ್ತಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು.
ಸುಸಜ್ಜಿತ ಕಟ್ಟಡವನ್ನು ಉದ್ಘಾಟನೆ ಮಾಡದ ಆರೋಗ್ಯ ಇಲಾಖೆ ವಿರುದ್ಧ ಸುತ್ತಮುತ್ತಲಿನ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದಷ್ಟು ಬೇಗ ಕಟ್ಟಡ ಉದ್ಘಾಟನೆ ಮಾಡಿ ಸಾರ್ವಜನಿಕರ ಅನುಕೂಲಕ್ಕೆ ಕಲ್ಪಿಸಬೇಕೆಂದು ಮನವಿ ಮಾಡಿದ್ದರು. ಶಾಸಕ ಬಾಲಕೃಷ್ಣ ಅವರ ಗಮನಕ್ಕೂ ತರಲಾಗಿತ್ತು. ಶಾಸಕರು ಸಂಬಂಧಿಸಿದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೆ ಮಾತನಾಡಿ ಲೋಕಾರ್ಪಣೆಗೆ ತಾಕೀತು ಮಾಡಿದ್ದರು.
ಶಾಸಕ ಬಾಲಕೃಷ್ಣ ಒತ್ತಾಯದ ಮೇರೆಗೆ ಅಧಿಕಾರಿಗಳು ಕಾರ್ಯ ಪ್ರವೃತರಾಗಿದ್ದು, ಇದರ ಭಾಗವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಉದ್ಘಾಟನೆ ಮಾಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಂಚೇಗೌಡನಪಾಳ್ಯದ ವಡ್ಡರದೊಡ್ಡಿ ಗೇಟ್ ಬಳಿ ವರ್ಷದ ಹಿಂದೆ ಆರೋಗ್ಯ ಕೇಂದ್ರ ನಿರ್ಮಾಣ ಮಾಡಿದ್ದರೂ ಉದ್ಘಾಟನೆ ಮಾಡಲು ಅಧಿಕಾರಿಗಳು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅಲ್ಲದೆ, ಶಾಸಕರ ಗಮನಕ್ಕೂ ತರಲಾಗಿತ್ತು. ಈಗ ಮುಂದಿನ 15 ದಿನಗಳಲ್ಲಿ ಉದ್ಘಾಟನೆ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. > ಶರತ್, ಸ್ಥಳಿಯ ನಿವಾಸಿಮಂಚೇಗೌಡನಪಾಳ್ಯದ ಬಳಿ ಹೊಸದಾಗಿ ನಿರ್ಮಾಣ ಮಾಡಿರುವ ಆರೋಗ್ಯ ಕೇಂದ್ರವನ್ನು ಮುಂದಿನ 2 ವಾರದಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಈಗಾಗಲೇ ನಮ್ಮ ಹಿರಿಯ ಅಧಿಕಾರಿಗಳು, ಇಲಾಖೆಯ ಸಚಿವರನ್ನು ಆಹ್ವಾನ ಮಾಡಿ ದಿನಾಂಕ ನಿಗದಿ ಪಡಿಸುವ ಕೆಲಸ ನಡೆಯುತ್ತಿದೆ. ಆರೋಗ್ಯ ಕೇಂದ್ರದ ಕಟ್ಟಡದ ಒಳಗೆ ಬಾಕಿ ಇದ್ದ ಕೆಲವು ಸಣ್ಣ ಪುಟ್ಟ ಕೆಲಸಗಳೂ ಮುಗಿದಿದ್ದು ಉದ್ಘಾಟನೆಯಾಗಿ ಸಾರ್ವಜನಿಕರ ಉಪಯೋಗಕ್ಕೆ ಸಿಗಲಿದೆ.> ಊಮಾಟಿಎಚ್ಒ ರಾಮನಗರ