

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಹಿರಿಯ ಮಗ ಮೆಕಾನಿಕಲ್ ಇಂಜಿನಿಯರ್ ಆಗಿ ವಿದೇಶದಲ್ಲಿ ಕೈತುಂಬಾ ಸಂಪಾದಿಸುತ್ತಿದ್ದಾರೆ. ಪುತ್ರಿ ಮತ್ತು ಅಳಿಯ ದಂತ ವೈದ್ಯರಾಗಿದ್ದು, ಕೇರಳದಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾರೆ. ಕಿರಿಯ ಪುತ್ರ ಗೋಣಿಕೊಪ್ಪದಲ್ಲಿ ಸ್ವಂತ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಅದರೆ, ಸ್ವಂತ ಮನೆ, ಕಾರಿನೊಂದಿಗೆ ಸ್ಥಿತಿವಂತರಾಗಿದ್ದರೂ ಟಿ.ಎಂ. ಶರೀಫ್ (ಸೂಫಿ) ಮಾತ್ರ ಇಂದಿಗೂ ವಿರಾಜಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗೆ ಲಗೇಜ್ ಲೋಡ್ ಮಾಡುವ ಕಾಯಕ ಮುಂದುವರಿಸಿದ್ದಾರೆ!
ಲೋಡರ್ ಕೆಲಸ ಬಿಟ್ಟು ನೆಮ್ಮದಿಯಾಗಿ ಮನೆಯಲ್ಲಿರುವಂತೆ ಪುತ್ರರು, ಪುತ್ರಿ, ಅಳಿಯ ಸೇರಿ ಕುಟುಂಬಸ್ಥರು ಹೇಳುತ್ತಾರೆ. ಆದರೆ, ತನ್ನ ಬದುಕು ರೂಪಿಸಿದ ಲಗೇಜ್ ಲೋಡ್ ವೃತ್ತಿಯಿಂದ ಹೊರ ಬರಲು ಟಿ.ಎಂ. ಶರೀಫ್ ಅವರಿಂದ ಸಾಧ್ಯವಾಗುತ್ತಿಲ್ಲ. 27 ವರ್ಷದ ಹಿಂದೆ ಬದುಕಿಗಾಗಿ ಕೇರಳದಿಂದ ವಿರಾಜಪೇಟೆಗೆ ಆಗಮಿಸಿದ ಶರೀಫ್ ಅವರನ್ನು ಜನ ಪ್ರೀತಿಯಿಂದ ಕರೆಯುವುದು ಮಾತ್ರ ಸೂಫಿ ಎಂದು.
ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹರಿಕೇರಿಯಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಹಿರಿಯ ಪುತ್ರ ಪೆರುಂಬಾಡಿಯಲ್ಲಿ ನಿವೇಶನ ಖರೀದಿಸಿದ್ದಾರೆ. ಲೋಡರ್ ಕೆಲಸ ಮಾಡಿ ಜೀವನ ಸಾಗಿಸುವ ಅನಿವಾರ್ಯತೆ ಮತ್ತು ಅಗತ್ಯ ಎರಡೂ ಈಗಿಲ್ಲ. ಹಾಗಿದ್ದರೂ, ಲಗೇಜ್ ಲೋಡ್ ಮಾಡುವ ಕಾಯಕದ ಮೇಲಿನ ಪ್ರೀತಿಯಿಂದ ಅದನ್ನು ಇಂದಿಗೂ ಮುಂದುವರಿಸಿದ್ದಾರೆ.
51ರ ಪ್ರಾಯದ ಸೂಫಿ 22ರ ಹರೆಯದಲ್ಲಿ ಖತೀಜಾ ಅವರನ್ನು ವಿವಾಹವಾಗಿ ವಿರಾಜಪೇಟೆಗೆ ಆಗಮಿಸಿದರು. ಪ್ರಾರಂಭಿಕ ದಿನಗಳಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಕೇರಳಕ್ಕೆ ಕೆಎಸ್ಆರ್ಟಿಸಿ ಬಸ್ ಮೂಲಕ ಹಲವು ವರ್ಷಗಳ ಹಿಂದೆ ಸಾಕಷ್ಟು ಉತ್ಪನ್ನಗಳು ಸಾಗಣೆಯಾಗುತ್ತಿದ್ದವು. ಹಾಗಾಗಿ ಲೋಡರ್ ಕೆಲಸ ಪ್ರಾರಂಭಿಸಿದರು. ಪ್ರತಿನಿತ್ಯ ಕನಿಷ್ಠ 1 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದರು.
ತನ್ನ ಲೋಡರ್ ಕೆಲಸದ ಮೂಲಕ ಹಿರಿಯ ಪುತ್ರ ಹಮೀದ್ನನ್ನು ಮೆಕಾನಿಕಲ್ ಇಂಜಿನಿಯರ್, ಪುತ್ರಿ ಹಬೀಬಾ ಅವರನ್ನು ದಂತ ವೈದ್ಯೆಯನ್ನಾಗಿ ಮಾಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರಿಂದ ಹಲವರು ಸಹಾಯ ಕೂಡ ಮಾಡಿದ್ದಾರೆ.
‘ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ನನಗೆ ಊಟ ಮಾಡಲು ಕಷ್ಟವಾಗಿತ್ತು. ಹಾಗಾಗಿ ವಯನಾಡಿನಲ್ಲಿದ್ದ ದೊಡ್ಡಪ್ಪನ ಮನೆಗೆ ಬಂದೆ. ದೊಡ್ಡಪ್ಪನ ಸಂಬಂಧಿಕರೂ ಆದ ಖತೀಜಾ ಅವರನ್ನು 1986ರಲ್ಲಿ ವಿವಾಹವಾಗಿ 1987ಕ್ಕೆ ವಿರಾಜಪೇಗೆ ಆಗಮಿಸಿದೆ. ಕೇರಳದಲ್ಲಿ ಇಬ್ಬರು ಹಿರಿಯ ಸಹೋದರರು, ಇಬ್ಬರು ಸಹೋದರಿಯರು, ಒಬ್ಬ ಸಹೋದರ ಇದ್ದಾರೆ. ನಾನು ಚೆನ್ನಾಗಿರುವುದನ್ನು ನೋಡಲು ತಂದೆ- ತಾಯಿ ಜೀವಂತವಾಗಿಲ್ಲ’ ಎಂದು ಶರೀಫ್ ಬೇಸರ ವ್ಯಕ್ತಪಡಿಸುತ್ತಾರೆ.
ತಮ್ಮ ಕಾಯಕದ ಮೇಲಿನ ಅಪಾರ ಪ್ರೀತಿಗೆ ಸೂಫಿ ಸಾಕ್ಷಿ. ಆರ್ಥಿಕವಾಗಿ ಸದೃಢರಾಗಿದ್ದು, ಮಕ್ಕಳು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಹೀಗಿದ್ದರೂ, ಲಗೇಜ್ ಲೋಡರ್ ವೃತ್ತಿ ಮುಂದುವರಿಸಿರುವುದು ಅವರ ವೃತ್ತಿ ಮೇಲಿನ ಪ್ರೀತಿಗೆ ಸಾಕ್ಷಿ. ಇದು ಪ್ರತಿಯೊಬ್ಬರಿಗೂ ಸ್ಪೂರ್ತಿ ತರುವ ವಿಚಾರ.
|ನಾ ಕನ್ನಡಿಗ (ಟಾಮಿ ಥೋಮಸ್) ರೆಸಾರ್ಟ್ ಉದ್ಯೋಗಿ, ಇಂಜಿಲಗೆರೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಲಗೇಜ್ ಲೋಡ್ ಮಾಡುವ ಕೆಲಸವನ್ನು 1987ರಲ್ಲಿ ಪ್ರಾರಂಭಿಸಿದೆ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿದ್ದು, ಈಗ ಉತ್ತಮ ವೃತ್ತಿಯಲ್ಲಿದ್ದಾರೆ. ಮಕ್ಕಳು ಕೈತುಂಬಾ ಸಂಬಳ ಹೊಂದಿದ್ದು, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ನನ್ನಲ್ಲಿ ಶಕ್ತಿ ಇರುವವರೆಗೂ ಲಗೇಜ್ ಲೋಡ್ ಮಾಡುವ ಕೆಲಸ ಮುಂದುವರಿಸುತ್ತೇನೆ.
| ಟಿ.ಎಂ. ಶರೀಫ್ ಲೋಡರ್, ವಿರಾಜಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ.