

ಕನಕಗಿರಿ (ಕೊಪ್ಪಳ): ಹೆತ್ತ ತಾಯಿಯನ್ನೇ ಹತ್ಯೆಗೈದ ಮಗ ತಂದೆ ಮೇಲೆ ಮಾರಣಾಂತಿಕ ಹಲ್ಲೆ ನಡರಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಪಟ್ಟಣದ 9 ನೇ ವಾರ್ಡ್ ನಿವಾಸಿ ರಾಮು (32) ತಾಯಿಯನ್ನೇ ಹತ್ಯೆ ಮಾಡಿರುವ ಪಾಪಿ ಮಗ. ಅಕ್ಕಮ್ಮ (55) ಮಗನಿಂದ ಕೊಲೆಯಾದ ತಾಯಿ. ಊರೆಲ್ಲ ನಿದ್ರೆಗೆ ಜಾರಿದ ಸಮಯದಲ್ಲಿ ಮನೆಯಲ್ಲಿ ರಾಮು ಗಲಾಟೆ ಮಾಡಿಕೊಂಡಿದ್ದಾನೆ. ಬೆಳಗ್ಗೆ 3.30 ಕ್ಕೆ ಕಬ್ಬಿಣದ ಹಾರೆಯಿಂದ ತಂದೆ-ತಾಯಿ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಅಕ್ಕಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡ ತಂದೆ ಗಿರಿಯಪ್ಪ (60)ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ರಾಮು ಹತ್ಯೆ ಬಳಿಕ ತಾನೇ ಕೂಗಾಡಿ ಜನರನ್ನು ಎಬ್ಬಿಸಿದ್ದಾನೆ. ಘಟನೆ ಕಂಡು ಜನರು ದಂಗಾಗಿದ್ದು, ಹೊಡೆತ ತಿಂದು ನರಳುತ್ತಿದ್ದ ಗಿರಿಯಪ್ಪನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಮು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ಹತ್ಯೆ ಕಾರಣವೆನೆಂದು ತನಿಖೆಯಿಂದ ತಿಳಿಯಬೇಕಿದೆ.