ಸಾಲದ ಕಂತು ಕಟ್ಟದ ಮಗ, ಅಮ್ಮನ ಮೇಲೇ ವಾಹನ ಹತ್ತಿಸಿ ಕೊಂದ!

Vehicle
Published on

ಮೈಸೂರು: ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರಬಹುದು, ಆದರೆ ಕೆಟ್ಟ ತಾಯಿ ಇರಲ್ಲ ಎಂಬ ಮಾತಿದೆ. ಅದನ್ನು ನೆನಪಿಸುವಂಥ ಪ್ರಕರಣವೊಂದು ನಡೆದಿದ್ದು, ಇಲ್ಲಿ ಮಗನೇ ತಾಯಿಯನ್ನು ಕೊಲೆ ಮಾಡಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಈ ಭಯಾನಕ ದುಷ್ಕೃತ್ಯ ನಡೆದಿದೆ.

ನಾಗಮ್ಮ (65) ಮಗನಿಂದಲೇ ಹತ್ಯೆಗೀಡಾದ ತಾಯಿ. ಹೇಮರಾಜ್ ಕೊಲೆ ಆರೋಪಿ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ದುರಂತವೆಂದರೆ ಮಗನಿಗಾಗಿ ತಾಯಿ ಸಾಲ ಕೊಡಿಸಿದ್ದು, ಸಾಲ ತೀರಿಸುವಂತೆ ಬುದ್ಧಿಮಾತು ಹೇಳಿದ್ದು ಸಾವಲ್ಲಿ ಅಂತ್ಯವಾಗಿದೆ.

ನಾಗಮ್ಮ ಮಗನಿಗಾಗಿ ಮೈಕ್ರೋಫೈನಾನ್ಸ್​ನಿಂದ 70 ಸಾವಿರ ರೂ. ಸಾಲ ಕೊಡಿಸಿದ್ದರು. ಆದರೆ ಕೆಲವು ತಿಂಗಳ ಬಳಿಕ ಸಾಲದ ಕಂತು ಕಟ್ಟಲು ಮಗ ಹಿಂದೇಟು ಹಾಕಿದ್ದ. ಈ ವಿಚಾರವಾಗಿ ತಾಯಿ ಆಗಾಗ ಬುದ್ಧಿ ಹೇಳಿ, ಸಾಲದ ಕಂತು ಪಾವತಿಸುವಂತೆ ಹೇಳುತ್ತಿದ್ದರು.

ತಾಯಿಯ ಬುದ್ಧಿಮಾತಿನಿಂದ ಸಿಟ್ಟಿಗೆದ್ದ ಮಗ, ಆಕೆಯ ಮೇಲೆ ತೂಫಾನ್ ವಾಹನ ಹರಿಸಿ ಕೊಲೆ ಮಾಡಿದ್ದಾನೆ. ಇಂದು ಸಾಲದ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಆಗ ಈತ ವಾಹನವನ್ನು ರಿವರ್ಸ್ ತೆಗೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಾಯಿಯ ಮೇಲೆಯೇ ಹತ್ತಿಸಿದ್ದಾನೆ. ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದು, ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net