ಮಾಗಡಿ: ತಂದೆಯೊಂದಿಗೆ ದ್ವಿಚಕ್ರವಾಹನದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಬಾಲಕ ಸರಕು ಸಾಗಣೆ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದು, ಬಾಲಕನ ತಂದೆಯೂ ಗಂಭೀರ ಗಾಯಗೊಂಡಿದ್ದಾರೆ.
ಕುಣಿಗಲ್ ತಾಲೂಕಿನ ನಾಗನಹಳ್ಳಿಯ ಹರ್ಷಿತ್(13) ಮೃತ ಬಾಲಕ. ಹರ್ಷಿತ್ ತಂದೆ ನಾಗೇಶ್ ಗಂಭೀರ ಗಾಯಗೊಂಡವರು. ಇಬ್ಬರೂ ಬೈಕ್ನಲ್ಲಿ ಕರಲಹಳ್ಳಿ ಶ್ರೀಬಸವೇಶ್ವರ ದೇವಾಲಯಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಕೋಂಡಹಳ್ಳಿ ಗೇಟ್ ಬಳಿ ಮಾಗಡಿ ಕಡೆಯಿಂದ ಬಂದ ಬೊಲೆರೋ ಡಿಕ್ಕಿಹೊಡೆದಿದೆ ಎನ್ನಲಾಗಿದ್ದು, ಡಿಕ್ಕಿ ರಭಸಕ್ಕೆ ಹರ್ಷಿತ್ ಹಾಗೂ ನಾಗೇಶ್ ಗಂಭೀರ ಗಾಯಗೊಂಡಿದ್ದರು. ಸ್ಥಳಿಯರು ಗಾಯಾಳುಗಳನ್ನು ಮಾಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಚಿಕಿತ್ಸೆಗೆ ಸ್ಪಂದಿಸದ ಹರ್ಷಿತ್ ಕೊನೆಯುಸಿರೆಳೆದಿದ್ದಾನೆ. ನಾಗೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ತಾಲೂಕಿನ ಆಗಲಕೋಟೆ ಹ್ಯಾಂಡ್ ಪೋಸ್ಟ್ನ ಸಿಎನ್ಎಸ್ ಮಾಡೆಲ್ ಶಾಲೆಯಲ್ಲಿ ಹರ್ಷಿತ್ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.