

ಸವಣೂರ: ಮಗ ಗೋವಾದಲ್ಲಿ, ತಾಯಿಯ ಶವ ಶಿಗ್ಗಾಂವಿಯಲ್ಲಿ. ಹೆತ್ತವ್ವಳ ಅಂತ್ಯ ಸಂಸ್ಕಾರಕ್ಕೂ ಕರೊನಾ ಅಡ್ಡಿ. ಕೊನೆಗೆ, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಸರೆಯಾಗಿದ್ದು ವಾಟ್ಸ್ಆಪ್ ವಿಡಿಯೋ ಕಾಲ್!
ಇಂತಹ ಕರುಣಾಜನಕ ಘಟನೆ ನಡೆದಿದ್ದು ಗುರುವಾರ ಶಿಗ್ಗಾಂವಿಯಲ್ಲಿ.
ಸವಣೂರ ಪಟ್ಟಣದ ಹೂಜರೆ ಓಣಿಯ ಪ್ಲಾಟ್ನಲ್ಲಿ ವಾಸವಾಗಿದ್ದ ವೃದ್ಧೆ ಶಾಂತವ್ವ ಶೇಖರಯ್ಯ ಶಿಗ್ಲಿಮಠ ಅವರು ಕಳೆದ ಎರಡು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರಿಗಿರುವ ಒಬ್ಬನೇ ಪುತ್ರ ಸುರೇಶ ಶಿಗ್ಲಿಮಠ ದುಡಿಯಲು ಗೋವಾಕ್ಕೆ ತೆರಳಿ ಅಲ್ಲೇ ನೆಲೆಸಿದ್ದಾರೆ. ತಾಯಿಯ ಅನಾರೋಗ್ಯದ ಕುರಿತು ಸ್ಥಳೀಯರು ತಿಳಿಸಿದ ತಕ್ಷಣ ಸುರೇಶ ಅವರು ಸವಣೂರಿಗೆ ಆಗಮಿಸಲು ಪ್ರಯತ್ನ ಪಟ್ಟರೂ ಲಾಕ್ಡೌನ್ ಹಾಗೂ ಸವಣೂರ ಸೀಲ್ಡೌನ್ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ.
ವೃದ್ಧೆಯ ಅನಾರೋಗ್ಯ ವಿಷಯ ತಿಳಿದ ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳು ಗೋವಾದಲ್ಲಿರುವ ಮಗನನ್ನು ಸಂರ್ಪಸಿ ತಾಯಿಯನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಸುರೇಶ ತಾಯಿ ಬಗ್ಗೆ ಕಾಳಜಿ ವಹಿಸಲು ಕೋರಿಕೊಂಡಿದ್ದರು.
ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳು ವೃದ್ಧೆಯನ್ನು ಸ್ಥಳೀಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮೂರು ದಿನ ಚಿಕಿತ್ಸೆ ಕೊಡಿಸಿದ್ದರು. ನಂತರ, ವೃದ್ಧೆಯ ಆರೈಕೆಗಾಗಿ ಸವಣೂರ ಸಿಡಿಪಿಒ ಅಣ್ಣಪ್ಪ ಹೆಗಡೆ ಸಹಕಾರದಿಂದ ಶಿಗ್ಗಾಂವಿ ಮೃತ್ಯುಂಜಯ ಆಸ್ಪತ್ರೆಯ ವತಿಯಿಂದ ವೈದ್ಯ ದಂಪತಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃದ್ಧಾಶ್ರಮಕ್ಕೆ ಬಿಟ್ಟು ಬರಲಾಗಿತ್ತು.
ಕಳೆದ ನಾಲ್ಕು ದಿನಗಳಿಂದ ಅನ್ನ-ನೀರು ಸೇವಿಸಲಾಗದೆ ಚಿಕಿತ್ಸೆ ಪಡೆಯುತ್ತಿದ್ದ ಶಾಂತವ್ವ ಗುರುವಾರ ಬೆಳಗ್ಗೆ ನಿಧನ ಹೊಂದಿದರು. ಸುದ್ದಿ ತಿಳಿದ ತಕ್ಷಣ ಮಗ ಆಗಮಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ನಂತರ ತಾಯಿ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಿದ. ಹೀಗಾಗಿ, ವೃದ್ಧಾಶ್ರಮದ ವತಿಯಿಂದ ಡಾ. ಎಂ.ಎಂ. ತಿರ್ಲಾಪೂರ, ಡಾ. ರಾಣಿ ತಿರ್ಲಾಪೂರ ದಂಪತಿ ಶಿಗ್ಗಾಂವಿ ವೀರಶೈವ ರುದ್ರಭೂಮಿಯಲ್ಲಿ ವೃದ್ಧೆಯ ಅಂತ್ಯ ಸಂಸ್ಕಾರ ಕೈಗೊಂಡರು.
ಅಂತ್ಯ ಸಂಸ್ಕಾರದ ದೃಶ್ಯವನ್ನು ವಾಟ್ಸ್ಆಪ್ ವಿಡಿಯೋ ಕಾಲ್ ಮೂಲಕ ಮಗನಿಗೆ ತೋರಿಸಲಾಯಿತು. ಆದರೆ, ಹೆತ್ತವ್ವಳ ಅಂತ್ಯ ಸಂಸ್ಕಾರದಲ್ಲಿ ನೇರವಾಗಿ ಪಾಲ್ಗೊಳ್ಳಲಾಗದೇ ಪುತ್ರ ಸುರೇಶ ಅವರ ರೋದನ ಮುಗಿಲು ಮುಟ್ಟಿತ್ತು.
ದಂಪತಿ ಕಾರ್ಯಕ್ಕೆ ಮೆಚ್ಚುಗೆ: ವೃದ್ಧೆಯ ಶವ ಸಂಸ್ಕಾರ ನೆರವೇರಿಸಿದ ಶಿಗ್ಗಾಂವಿ ಮೃತ್ಯುಂಜಯ ಆಸ್ಪತ್ರೆಯ ಹರ್ಲಾಪೂರ ವೈದ್ಯ ದಂಪತಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಸಿಡಿಪಿಒ ಅಣ್ಣಪ್ಪ ಹೆಗಡೆ, ಶಿಗ್ಗಾಂವಿ ಆರ್ಐ ಐ.ಎಂ. ಪಾಟೀಲ, ಸವಣೂರ ಆರ್ಐ ಡಿ.ಎಂ. ಪಾಟೀಲ, ಆಶ್ರಮ ನಿರ್ದೇಶಕರಾದ ಶಶಿಕಾಂತ ರಾಥೋಡ, ಕವಿತಾ ರಾಥೋಡ, ಮಹೇಶ ಸೂರ್ಯವಂಶಿ, ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಯೋಗೇಂದ್ರ ಜಂಬಗಿ, ಶಂಕ್ರಯ್ಯ ಹಿರೇಮಠ, ಆನಂದ ಮತ್ತಿಗಟ್ಟಿ, ಮಲ್ಲಪ್ಪ ನೀರಲಗಿ, ಮಂಜುನಾಥ ಗಡೆಪ್ಪನವರ ಹಾಗೂ ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.