ಹುಣಸೂರು: ಹುಣಸೂರು ನಗರದ ಅಬಕಾರಿ ಡಿವೈಎಸ್‌ಪಿ ಕಚೇರಿಯಲ್ಲಿದ್ದ ಕೆಲ ಪ್ರಕರಣಕ್ಕೆ ಸಂಬಂಧಿಸಿದ ಮಹತ್ತರ ದಾಖಲೆಗಳು ಮತ್ತು ಸಮವಸ್ತ್ರವನ್ನು ಸುಟ್ಟುಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಅಬಕಾರಿ ಇಲಾಖೆ ಸಿಬ್ಬಂದಿ ಅ.10ರಂದು ನಗರಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಅ.6 ರಿಂದ 8ರ ಮಧ್ಯದಲ್ಲಿ ಪ್ರಕರಣ ನಡೆದಿದೆ. ಕಚೇರಿಯಲ್ಲಿದ್ದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳ ಪೈಕಿ ಕೆಲವೊಂದು ದಾಖಲೆಗಳನ್ನು ಕಿಡಿಗೇಡಿಗಳು ಕಚೇರಿ ಆವರಣದ ಕಾಂಪೌಂಡ್ ಬಳಿ ಸುಟ್ಟುಹಾಕಿರುವ ಕುರುಹುಗಳಿವೆ. ಅಲ್ಲದೆ ಡಿವೈಎಸ್‌ಪಿ ರೂಮ್‌ನಲ್ಲಿದ್ದ ಸಮವಸ್ತ್ರವನ್ನೂ ಸುಟ್ಟು ಹಾಕಲಾಗಿದೆ. ನಗರಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬಾಗಿಲು ಒಡೆದಿಲ್ಲ, ಏನನ್ನೂ ಲಪಟಾಯಿಸಿಲ್ಲ: ಅಬಕಾರಿ ಇಲಾಖೆಯಲ್ಲಿನ ಈ ಪ್ರಕರಣ ಅತ್ಯಂತ ವಿಚಿತ್ರ ಪ್ರಕರಣವೆನಿಸಿದೆ. ಕಿಡಿಗೇಡಿಗಳು ತಮ್ಮ ಕುಕೃತ್ಯ ನಡೆಸಲು ಕಚೇರಿ ಬಾಗಿಲು ಒಡೆದಿಲ್ಲ. ಕೀಲಿಕೈ ಬಳಸಿ ಬೀಗ ತೆಗೆದಿದ್ದಾರೆ. ಕೆಲವೊಂದು ಪ್ರಕರಣಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಮಾತ್ರ ಸುಟ್ಟುಹಾಕಿದ್ದಾರೆ ಎನ್ನಲಾಗುತ್ತಿದೆ. ಅಂದರೆ ಇಲಾಖೆಯಲ್ಲಿರುವ ಸಿಬ್ಬಂದಿಯೇ ಈ ಕೃತ್ಯವನ್ನು ಮಾಡಿರುವ ಶಂಕೆಯನ್ನು ಇಲಾಖೆ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಸರ್ಕಾರದ ಬೊಕ್ಕಸವನ್ನು ತುಂಬುವ ಇಲಾಖೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಬಕಾರಿ ಇಲಾಖೆಯ ಹುಣಸೂರು ಕಚೇರಿಗೆ ಇಂದಿಗೂ ಸಿಸಿ ಕ್ಯಾಮರಾ ಅಳವಡಿಕೆಯಾಗಿಲ್ಲವೆನ್ನುವುದೇ ದುರಂತದ ಸಂಗತಿಯಾಗಿದೆ.