

ನಾಗಮಂಗಲ: ಪೌತಿ ಖಾತೆ ಮಾಡಿಸಿಕೊಳ್ಳುವಂತೆ ವಾರಕ್ಕೊಮ್ಮೆ ಆಂದೋಲನದ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ಕೆಲ ರೈತರು ಪೌತಿಖಾತೆ ಮಾಡಿಸಿಕೊಳ್ಳಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ತಹಸೀಲ್ದಾರ್ ನಯೀಂ ಉನ್ನೀಸಾ ತಿಳಿಸಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ಆಯೋಜಿಸಿದ್ದ ರೈತ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ 9 ಸಾವಿರಕ್ಕೂ ಹೆಚ್ಚು ಪೌತಿಖಾತೆ ಪ್ರಕರಣಗಳು ಬಾಕಿಯಿದ್ದು, ಈ ಕುರಿತು ಪ್ರತಿ ಗ್ರಾಮವಾರು ಈಗಾಗಲೇ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ ವಿವಿಧ ಕಾರಣಗಳಿಂದಾಗಿ ರೈತರು ಪೌತಿಖಾತೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ರೈತರು ಯಾವುದೇ ಆತಂಕಕ್ಕೊಳಗಾಗದೆ ಅಗತ್ಯ ದಾಖಲೆಗಳನ್ನು ನೀಡಿ ಪೌತಿಖಾತೆ ಮಾಡಿಸಿಕೊಳ್ಳುವ ಜತೆಗೆ ತಮ್ಮ ಜಮೀನಿನ ಎಲ್ಲ ಸರ್ವೇ ನಂಬರ್‌ಗಳನ್ನು ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಬೇಕು. ರೈತ ಸಂಘದ ಮುಖಂಡರೂ ತಮ್ಮ ವ್ಯಾಪ್ತಿಯ ರೈತರಲ್ಲಿ ಈ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ರೈತ ಸಂಘದ ಮುಖಂಡರು ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರ ಕೆಲಸ ಕಾರ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಹಳ್ಳಿಗಳಲ್ಲಿ ಕೂಲಿ ಕೆಲಸವನ್ನು ಬಿಟ್ಟು ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ರೈತರು ತಾಲೂಕು ಕಚೇರಿಗೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಕಳೆದ ಮೂರ‌್ನಾಲ್ಕು ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಂದ ಹಣ ಕಟ್ಟಿಸಿಕೊಳ್ಳಲಾಗಿದೆ. ಆದರೂ ಈವರೆಗೂ ಅಂತಹ ರೈತರಿಗೆ ಆರ್‌ಟಿಸಿ ಇಂಡೀಕರಣ ಮಾಡಿಕೊಟ್ಟಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ತಾಲೂಕಿನ ಕಂದಾಯ ಇಲಾಖೆಯ ಅವ್ಯವಸ್ಥೆಯನ್ನು ಸಚಿವರ ಗಮನಕ್ಕೆ ತರುವುದು ರೈತಸಂಘಕ್ಕೆ ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಪಂ ಇಒ ವೈ.ಎನ್.ಚಂದ್ರಮೌಳಿ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಸಿಡಿಪಿಒ ಕೃಷ್ಣಮೂರ್ತಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಮೇಶ್, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಶೋಕ್‌ಕುಮಾರ್, ರೈತ ಸಂಘದ ಮುಖಂಡರಾದ ಹರಳಕೆರೆ ಗೋಪಾಲಕೃಷ್ಣ, ದಡಗ ಸತೀಶ್, ಶ್ರೀರಂಗಪುರ ರಂಗೇಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.