

ಹಾಸನ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾಗಿ ಸೋಮನಹಳ್ಳಿ ನಾಗರಾಜ್ ಮರು ಆಯ್ಕೆಯಾದರು. ಅರಸೀಕೆರೆಯ ಶೇಖರಪ್ಪ ಇದೇ ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಶುಕ್ರವಾರ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಗರಾಜ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೇಖರಪ್ಪ ಇಬ್ಬರೇ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ವಾಪಸ್ ಪಡೆಯುವ ಪ್ರಕ್ರಿಯೆ ಮುಗಿದ ನಂತರ ಎಲ್ಲವೂ ಕ್ರಮಬದ್ಧವಾಗಿದ್ದರಿಂದ ಮುಖ್ಯ ಚುನಾವಣಾಧಿಕಾರಿ ಮಾರುತಿ ಅವರು ಅಧ್ಯಕ್ಷ-ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿದರು. ಈ ಮೂಲಕ ಸತತ 3ನೇ ಬಾರಿಗೆ ನಾಗರಾಜ್ ಅಧ್ಯಕ್ಷರಾಗಿ ವಿಶೇಷ ದಾಖಲೆ ಬರೆದಿದ್ದಾರೆ.
ನಂತರ ಮಾತನಾಡಿದ ನಾಗರಾಜ್, ತಮ್ಮ ಅವಿರೋಧ ಆಯ್ಕೆಗೆ ಸಹಕರಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಬಾಲಕೃಷ್ಣ, ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ ಅವರಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಸಹಕಾರಿ ಬಂಧುಗಳಿಗೆ ಧನ್ಯವಾದ ಹೇಳಿದರು.
ಎಲ್ಲ 13 ಸ್ಥಾನಗಳನ್ನು ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲು, ಬ್ಯಾಂಕ್ ಉತ್ತಮ ರೀತಿಯಲ್ಲಿ ಬೆಳೆಯಲು ರೇವಣ್ಣ ಅವರು ಕಾರಣ. ಮೂರನೇ ಬಾರಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿರುವುದರಿಂದ ಜವಾಬ್ದಾರಿ ಇನ್ನೂ ಹೆಚ್ಚಿದೆ. ಇದು ಸುಖದ ಸುಪ್ಪತ್ತಿಗೆ ಅಲ್ಲ, ಮುಳ್ಳಿನ ಹಾಸಿಗೆ. ಹಿಂದೆ ನಬಾರ್ಡ್‌ನಿಂದ ಆರ್ಥಿಕ ನೆರವು, ಪುನರ್ಧನ ಶೇ.90 ರಷ್ಟು ಸಿಗುತ್ತಿತ್ತು. ಆದರೀಗ ಶೇ.10ಕ್ಕೆ ಇಳಿದಿದೆ ಎಂದರು.
ಉಪಾಧ್ಯಕ್ಷ ಶೇಖರಪ್ಪ ಮಾತನಾಡಿ, ಮೊದಲ ಬಾರಿಗೆ ನಿರ್ದೇಶಕನಾದ ನನಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದ್ದು, ಇದಕ್ಕೆ ಕಾರಣರಾದ ರೇವಣ್ಣ ಅವರಾದಿಯಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ರೈತರಿಗೆ ಪ್ರಾಮಾಣಿಕ ಕೆಲಸ ಮಾಡಲು ಶ್ರಮಿಸುವೆ ಎಂದು ಭರವಸೆ ನೀಡಿದರು.
ಶಾಸಕ ಸ್ವರೂಪ್ ಪ್ರಕಾಶ್ ನೂತನ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ಬ್ಯಾಂಕನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಿರಿ ಎಂದು ಮನವಿ ಮಾಡಿದರು. ಜಿಲ್ಲಾ ಸಹಕಾರ ಇಲಾಖೆ ಉಪ ನಿಬಂಧಕರಾದ ಕಿರಣ್ ಕುಮಾರ್, ಹಾಸನ ಉಪವಿಭಾಗದ ಸಹಾಯಕ ನಿಬಂಧಕ ಬಾಲಚಂದ್ರ ಹಾಗೂ ಎಲ್ಲ ನಿರ್ದೇಶಕರು ಹಾಜರಿದ್ದರು. ಇದಕ್ಕೂ ಮುನ್ನ ಮುಖ್ಯ ಚುನಾವಣಾಧಿಕಾರಿ ಮಾರುತಿ ಅವರು ಗೆದ್ದಿರುವ ಎಲ್ಲ 13 ನೂತನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು.
ದೇವೇಗೌಡರಿಂದ ತಳಹದಿ: ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕ ಎಚ್.ಡಿ.ರೇವಣ್ಣ ಹಾಗೂ ಎಲ್ಲ ಶಾಸಕರ ಸಹಕಾರದಿಂದ ಬ್ಯಾಂಕ್ ಇಂದು ಸಬಲವಾಗಿ ಬೆಳೆದಿದೆ ಎಂದರು. ಬ್ಯಾಂಕ್‌ಗೆ ದೇವೇಗೌಡರು ಉತ್ತಮ ತಳಹದಿ ಹಾಕಿದ್ದಾರೆ. ಅವರು ಉಳಿಸಿದ ಬ್ಯಾಂಕನ್ನು ದಿ.ಪಟೇಲ್ ಶಿವರಾಂ, ನಾನು, ಹೊನ್ನವಳ್ಳಿ ಸತೀಶ್, ಸೋಮನಹಳ್ಳಿ ನಾಗರಾಜ್ ಮೊದಲಾದವರು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಬಂದಿದ್ದೇವೆ. ಲಕ್ಷಾಂತರ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸರ್ಕಾರದ ವಿಶ್ವಾಸ ಪಡೆದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಿ, ರೈತರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲ ಮಾಡಿಕೊಡಿ ಎಂದು ನೂತನ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಸಲಹೆ ನೀಡಿದರು. ನೂತನ ಅಧ್ಯಕ್ಷರು-ಉಪಾಧ್ಯಕ್ಷರನ್ನು ಅಭಿನಂದಿಸಿದರು.