ಕುಡಿಯುವ ನೀರಿನ ಸಮಸ್ಯೆ ನಿವಾರಣೆ

Sul_Sabhe
Published on

ಸುಳ್ಯ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿ ಆರಂಭಗೊಂಡಿದ್ದು, ಸುಳ್ಯ ತಾಲೂಕಿನ ಎಲ್ಲ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ತೀರಾ ದುಸ್ಥಿತಿಯಲ್ಲಿರುವ ಸುಳ್ಯ-ಪೈಚಾರ್-ಬೆಳ್ಳಾರೆ- ನಿಂತಿಕಲ್ಲು ರಸ್ತೆ ಅಭಿವೃದ್ಧಿ ಕುರಿತು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕುರಿತು ಸೋಮವಾರ ತಾ.ಪಂನ ಶಾಸಕರ ಕಚೇರಿಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.

ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್‌ಗಳು ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್‌ಗಳು ಮಾಹಿತಿ ನೀಡಿದರು.

ಸುಳ್ಯ-ನಾಗಪಟ್ಟಣ ಸಂಪರ್ಕಿಸುವ ನಾಗಪಟ್ಟಣ ಸೇತುವೆ ದುರಸ್ತಿಗೆ 70 ಲಕ್ಷ ರೂ., ಗುತ್ತಿಗಾರ್, ಬಳ್ಳಕ್ಕ ಪಂಜ ಜಳಕದ ಹೊಳೆ ಸೇತುವೆ ದುರಸ್ತಿಗೆ 70 ಲಕ್ಷ ರೂ., ಪುಳಿಕುಕ್ಕು ಎಡಮಂಗಲ ರಸ್ತೆಯ ಮಾಲೆಂಗೇರಿ ಎಂಬಲ್ಲಿ ಕುಸಿದ ಮೋರಿಯ ಮರುನಿರ್ಮಾಣಕ್ಕೆ 30 ಲಕ್ಷ ರೂ. ಅನುದಾನ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಕೆಲಸಗಳು ಆಗಲಿವೆ ಎಂದು ಇಂಜಿನಿಯರ್ ಗೋಪಾಲ್ ಕೆ. ಮಾಹಿತಿ ನೀಡಿದರು.

ಜಿಪಂ ಮಾಜಿ ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ ಕಂಜಿಪಿಲಿ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಿತೇಂದ್ರ, ಸಹಾಯಕ ಇಂಜಿನಿಯರ್ ಗುರುಪ್ರಸಾದ್, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್‌ಗಳಾದ ಮಣಿಕಂಠ, ಜನಾರ್ದನ, ಗುತ್ತಿಗೆದಾರ ಶಂಕರನಾರಾಯಣ, ಕಂಪನಿಯ ಯೋಜನಾ ವ್ಯವಸ್ಥಾಪಕ ಶ್ರೀನಿವಾಸ ಕುಲಕರ್ಣಿ, ಆಡಳಿತ ವ್ಯವಸ್ಥಾಪಕರಾದ ಯಶ್ವಿನ್ ಭಾಗವಹಿಸಿದ್ದರು.

ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ, ಬಾಲಕೃಷ್ಣ ಕೀಲಾಡಿ, ಶ್ರೀನಾಥ್ ರೈ ಬಾಳಿಲ, ಸುನೀಲ್ ಕೇರ್ಪಳ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.

ಟೆಂಡರ್ ಹಂತದಲ್ಲಿ ಕಾಮಗಾರಿ

ಸುಳ್ಯ-ಪೈಚಾರ್-ಬೆಳ್ಳಾರೆ-ನಿಂತಿಕಲ್ಲು ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿಯಿಂದ(ಸಿಆರ್‌ಐಎಫ್) 6 ಕೋಟಿ ರೂ. ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ(ಎಸ್‌ಎಚ್‌ಡಿಪಿ) 10 ಕೋಟಿ ರೂ. ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ ಎಂದು ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್‌ಗಳು ಮಾಹಿತಿ ನೀಡಿದರು. ಟೆಂಡರ್ ಪೂರ್ತಿಯಾಗಿ ಡಿ.15ರ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net