

ಮದ್ದೂರು: ನಮ್ಮ ಬೀದಿಯಲ್ಲಿ ರಸ್ತೆ ಸರಿಯಿಲ್ಲ… ಬೀದಿ ದೀಪಗಳು ಇಲ್ಲ… ಸ್ವಚ್ಛತೆ ಇಲ್ಲ… ಚರಂಡಿ ಮತ್ತು ಯುಜಿಡಿ ನೀರು ಕೆಮ್ಮಣ್ಣುನಾಲೆಗೆ ಸೇರುತ್ತಿದೆ… ನಾಲೆ ಅಕ್ಕಪಕ್ಕದ ಮನೆಗಳಲ್ಲಿ ರಾತ್ರಿಯ ವೇಳೆ ಸೊಳ್ಳೆಗಳ ಕಾಟ….
ಪಟ್ಟಣದ ಚನ್ನೇಗೌಡನದೊಡ್ಡಿ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ ಅವರಿಗೆ ಸಾರ್ವಜನಿಕರು ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ನೂರಾರು ಅರ್ಜಿಗಳನ್ನು ನೀಡಿದರು. ಅರ್ಜಿಗಳನ್ನು ಸ್ವೀಕರಿಸಿದ ಶಾಸಕರು, ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ.ಉದಯ್ ಮಾತನಾಡಿ, ಪಟ್ಟಣವನ್ನು ಸಮಗ್ರ ಅಭಿವೃದ್ಧಿ ಮಾಡಿ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವುದು ನನ್ನ ಗುರಿಯಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಯುಜಿಡಿ ಸೇರಿದಂತೆ ಸಾಕಷ್ಟು ಸಮಸ್ಯೆಗಳಿದ್ದು, ಅದನ್ನು ಸರಿಪಡಿಸಿ ರಾಜ್ಯದಲ್ಲೇ ಮಾದರಿ ಪಟ್ಟಣ ಮಾಡಲಾಗುವುದು ಎಂದರು.
ಅಭಿವೃದ್ಧಿ ವಿಷಯದಲ್ಲಿ ಪಟ್ಟಣ 20 ವರ್ಷಗಳ ಹಿಂದಕ್ಕೆ ಹೋಗಿದೆ. ಇದಕ್ಕೆ ಕಾರಣ ಏನು ಎಂಬುದು ಗೊತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ನಾನು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ರಾಜಿಯಾಗಬಾರದು ಎಂದು ತಾಕೀತು ಮಾಡಿದರು.
ಪುರಸಭೆಯಿಂದ ಬಗೆಹರಿಯುವ ಸಮಸ್ಯೆಗಳನ್ನು ಸಾರ್ವಜನಿಕರು ನನ್ನ ಗಮನಕ್ಕೆ ತರುತ್ತಿದ್ದು, ಅಂತಹ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಇತ್ಯರ್ಥಗೊಳಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಎಡಿಟಿಸಿ ತರಬೇತಿ ಕೇಂದ್ರದಲ್ಲಿ 30 ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಿದ್ದಾರೆ. ಆದರೆ ನಮಗೆ ಇದುವರೆಗೆ ಯಾವುದೇ ಪ್ರಮಾಣ ಪತ್ರ ಮತ್ತು ಪವರ್ ಮಿಷನ್ ಯಂತ್ರಗಳನ್ನು ನೀಡದೆ ಅನ್ಯಾಯವೆಸಗಿದ್ದಾರೆ. ಈ ಸಂಬಂಧ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ತರಬೇತಿ ಪಡೆದ ಸುಪ್ರಿಯಾ, ರಂಜಿತಾ ಸೇರಿದಂತೆ 20ಕ್ಕೂ ಹೆಚ್ಚು ಮಹಿಳೆಯರು ಶಾಸಕ ಕೆ.ಎಂ.ಉದಯ್ ಅವರಲ್ಲಿ ಮನವಿ ಮಾಡಿದರು. ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.